ʼತುಕ್ಡೆ ತುಕ್ಡೆ ಗ್ಯಾಂಗ್‌ನಿಂದ ಭಾರತ್ ಬದ್ನಾಮಿ ಬ್ರಿಗೇಡ್‌ʼವರೆಗೆ: ಮಮತಾ ಬ್ಯಾನರ್ಜಿಯ ಆಕ್ಸ್ ಫರ್ಡ್ ಭಾಷಣದ ವಿರುದ್ಧ ಬಿಜೆಪಿ ವಾಗ್ದಾಳಿ

Update: 2025-03-28 21:56 IST
ʼತುಕ್ಡೆ ತುಕ್ಡೆ ಗ್ಯಾಂಗ್‌ನಿಂದ ಭಾರತ್ ಬದ್ನಾಮಿ ಬ್ರಿಗೇಡ್‌ʼವರೆಗೆ: ಮಮತಾ ಬ್ಯಾನರ್ಜಿಯ ಆಕ್ಸ್ ಫರ್ಡ್ ಭಾಷಣದ ವಿರುದ್ಧ ಬಿಜೆಪಿ ವಾಗ್ದಾಳಿ

ಮಮತಾ ಬ್ಯಾನರ್ಜಿ | PC : PTI 

  • whatsapp icon

ಹೊಸದಿಲ್ಲಿ: 2060ರ ವೇಳೆಗೆ ಭಾರತವು ಜಗತ್ತಿನ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂಬ ಮುನ್ನೋಟವನ್ನು ತಮ್ಮ ಆಕ್ಸ್ ಫರ್ಡ್ ಭಾಷಣದಲ್ಲಿ ಪ್ರಶ್ನಿಸಿದ್ದ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿರುವ ಬಿಜೆಪಿ, ಮಮತಾ ಬ್ಯಾನರ್ಜಿ ವಿದೇಶಿ ನೆಲದಲ್ಲಿ ದೇಶವನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿದೆ.

ಕೆಲ್ಲಾಗ್ ಕಾಲೇಜ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ, “ಭಾರತವು ಈಗಾಗಲೇ ಬ್ರಿಟನ್ ಅನ್ನು ಹಿಂದಿಕ್ಕಿದೆ. ನಾವೀಗ ವಿಶ್ವದ ಆರನೆ ಅತಿ ದೊಡ್ಡ ಆರ್ಥಿಕತೆಯಾಗಿದ್ದರೆ, ಭಾರತವು ಐದನೆಯ ಅತಿ ದೊಡ್ಡ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಅದು ವಿಶ್ವದ ಮೂರನೆಯ ಅತಿ ದೊಡ್ಡ ಆರ್ಥಿಕತೆಯಾಗಲಿದೆ. 2060ರ ವೇಳೆಗೆ ಭಾರತವು ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಂದಾಜಿಸಲಾಗಿದೆ” ಎಂದು ಸಮನ್ವಯಕಾರರು ಹೇಳಿದ್ದರು.

ಆದರೆ, ಅವರ ಅನಿಸಿಕೆಯನ್ನು ಅಲ್ಲಗಳೆದಿದ್ದ ಮಮತಾ ಬ್ಯಾನರ್ಜಿ, ನನಗೆ ಇದರ ಬಗ್ಗೆ ಭಿನ್ನಾಭಿಪ್ರಾಯವಿದೆ ಎಂದು ಆಕ್ಷೇಪಿಸಿದ್ದರು. “ನಾನಿಲ್ಲಿ ಮಾತನಾಡಬಾರದ ಅನೇಕ ವಿಷಯಗಳಿವೆ. ಅವು ಆಂತರಿಕ ಹಾಗೂ ವಿದೇಶಾಂಗ ವ್ಯವಹಾರಗಳ ವಿಷಯಗಳಾಗಿದ್ದು, ಅವನ್ನು ನಾನು ಬಹಿರಂಗ ಪಡಿಸುವಂತಿಲ್ಲ. ನನಗೆ ಸ್ವಲ್ಪ ಬೇರೆ ಅಭಿಪ್ರಾಯವೂ ಇದೆ. ಕೋವಿಡ್ ನಂತರ ಪ್ರತಿ ದೇಶವೂ ಸವಾಲುಗಳನ್ನು ಎದುರಿಸುತ್ತಿದ್ದು, ವಿಶ್ವದಲ್ಲಿ ಕ್ಷೋಭೆಯ ವಾತಾವರಣವೂ ಇದೆ. ಒಂದು ವೇಳೆ ಆರ್ಥಿಕ ಯುದ್ಧದಂತಹ ಪರಿಸ್ಥಿತಿಗೆ ವಿಶ್ವ ಹೋಗುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನಮಗೆ ಲಾಭವಾಗಲಿದೆ ಎಂದು ನಾವು ಹೇಗೆ ನಿರೀಕ್ಷಿಸಲು ಸಾಧ್ಯ? ನಾವು ಲಾಭವಾಗಲೆಂದು ಆಶಿಸೋಣ. ಆದರೆ, ನಾವು ಹಾಗೆಂದು ಆಶಿಸಬಹುದು ಮಾತ್ರ. ನಮ್ಮ ದೇಶವು ಅತ್ಯುತ್ತಮ ಸಾಧನೆ ಮಾಡಬೇಕು ಎಂಬುದು ನಮ್ಮ ಕನಸಾಗಿದೆ. ಆದರಿದು ಪರಿಸ್ಥಿತಿಯನ್ನು ಅವಲಂಬಿಸಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮಮತಾ ಬ್ಯಾನರ್ಜಿಯ ಈ ಹೇಳಿಕೆಯನ್ನು ಆಕ್ಷೇಪಿಸಿರುವ ಬಿಜೆಪಿ ನಾಯಕರು, ಭಾರತದ ಸಾಧನೆಯನ್ನು ತುಚ್ಛವಾಗಿ ಪರಿಗಣಿಸಿರುವ ಮಮತಾ ಬ್ಯಾನರ್ಜಿ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಮಹತ್ವಾಕಾಂಕ್ಷೆಯನ್ನು ಲೇವಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿ ವಿರುದ್ಧದ ವಾಗ್ದಾಳಿಯ ನೇತೃತ್ವ ವಹಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಅವರ ಹೇಳಿಕೆಯು ಅಪಮಾನಕರ ಎಂದು ಟೀಕಿಸಿದ್ದಾರೆ.

“ಮಮತಾ ಬ್ಯಾನರ್ಜಿ ಸತ್ಯವನ್ನು ಬಚ್ಚಿಡುವ ಹಾಗೂ ಭಾರತವನ್ನುಅಪಮಾನಿಸುವ ಎರಡೂ ಕೆಲಸಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಭಾರತದ ಆರ್ಥಿಕ ಪ್ರಗತಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಆದರೆ, ಮಮತಾ ಬ್ಯಾನರ್ಜಿ ಹಾಗೂ ತುಕ್ಡೆ ತುಕ್ಡೆ ಗ್ಯಾಂಗ್ ನ ಸದಸ್ಯರು ವಿದೇಶಗಳಿಗೆ ತೆರಳಿ, ಅಲ್ಲಿ ಭಾರತವನ್ನು ಅವಮಾನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿಯ ಮುಖ್ಯಸ್ಥ ಹಾಗೂ ಕೇಂದ್ರ ಕಿರಿಯ ಸಚಿವ ಸುಕಾಂತ ಮಜುಂದಾರ್ ಕೂಡಾ ಮಮತಾ ಬ್ಯಾನರ್ಜಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, “ಮಮತಾ ಬ್ಯಾನರ್ಜಿ ವಿದೇಶಿ ನೆಲದಲ್ಲಿ ಭಾರತದ ಖ್ಯಾತಿಗೆ ಕಳಂಕ ತರುತ್ತಿದ್ದಾರೆ. ಅವರ ಭಾರತ ವಿರೋಧಿ ಧೋರಣೆಯು ಕೇವಲ ಬಂಗಾಳಿಗಳು ಹಾಗೂ ಭಾರತೀಯರಿಗೆ ಮಾತ್ರ ಅಪಮಾನಕರವಲ್ಲ; ಬದಲಿಗೆ ಆಕೆ ಹೊಂದಿರುವ ಸಾಂವಿಧಾನಿಕ ಹುದ್ದೆಗೂ ಅಪಮಾನಕರ. ನೀವು ಮುಖ್ಯಮಂತ್ರಿಯಾಗಿ ವಿಫಲವಾಗಿರುವುದು ಸಾಬೀತಾಗಿದೆ. ಆದರೆ, ನಿಮ್ಮನ್ನು ನೀವು ಭಾರತೀಯಳು ಎಂದು ಕರೆದುಕೊಳ್ಳಲೂ ಮುಜುಗರ ಪಡುತ್ತೀರಾ? ನೀವು ನಿಜವಾಗಿಯೂ ಭಾರತೀಯರೇ?” ಎಂದು ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡಾ ಆಕ್ಸ್ ಫರ್ಡ್ ಕಾಲೇಜೊಂದರಲ್ಲಿ ನಡೆದಿದ್ದ ಸಂವಾದದ ವಿಡಿಯೊವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಮಮತಾ ಬ್ಯಾನರ್ಜಿಯು ವಿದೇಶದಲ್ಲಿ ಭಾರತದ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News