ಪಂಜಾಬ್: ಸ್ವಯಂಘೋಷಿತ ಪಾದ್ರಿಯಿಂದ ಮಹಿಳೆಗೆ ಕಪಾಳಮೋಕ್ಷ; ವೀಡಿಯೊ ವೈರಲ್

Update: 2025-03-23 21:40 IST
ಪಂಜಾಬ್: ಸ್ವಯಂಘೋಷಿತ ಪಾದ್ರಿಯಿಂದ ಮಹಿಳೆಗೆ ಕಪಾಳಮೋಕ್ಷ; ವೀಡಿಯೊ ವೈರಲ್
PC : X \ @Gagan4344
  • whatsapp icon

ಚಂಡಿಗಡ: ಸ್ವಯಂಘೋಷಿತ ಕ್ರೈಸ್ತ ಪ್ರವಾದಿ ಬಜಿಂದರ್ ಸಿಂಗ್ ತನ್ನ ಕಚೇರಿಯಲ್ಲಿ ಮಹಿಳೆಯರು ಸೇರಿದಂತೆ ಹಲವರ ಮೇಲೆ ಪದೇ ಪದೇ ಹಲ್ಲೆ ನಡೆಸುತ್ತಿರುವ ವೀಡಿಯೊ ವೈರಲ್ ಆಗಿದೆ. ಫೆಬ್ರವರಿ, 2025ರಲ್ಲಿ ಚಿತ್ರೀಕರಿಸಲಾಗಿತ್ತು ಎನ್ನಲಾಗಿರುವ ಈ ವೀಡಿಯೊ ಜನಾಕ್ರೋಶವನ್ನು ಹುಟ್ಟುಹಾಕಿದೆ. ಜೊತೆಗೆ ‘ಏಶು ಏಶು’ ಖ್ಯಾತಿಯ ಈ ಪ್ಯಾಸ್ಟರ್ ವಿರುದ್ಧ ತಕ್ಷಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಕಚೇರಿಯಲ್ಲಿ ಇತರರೊಂದಿಗೆ ಕುಳಿತಿದ್ದ ಉದ್ಯೋಗಿಯನ್ನು ಸಮೀಪಿಸುವ ಮುನ್ನ ಸಿಂಗ್ ಆತನತ್ತ ಮೊಬೈಲ್ ಫೋನ್ ಎಸೆಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಬಳಿಕ ಅಲ್ಲಿದ್ದ ಲೇಡಿಸ್ ಪರ್ಸ್ನಿಂದ ಆತನ ಮೇಲೆ ಹಲ್ಲೆ ನಡೆಸಿದ ಸಿಂಗ್ ಇತರ ಸಿಬ್ಬಂದಿಗಳ ಎದುರಿಗೇ ಕಪಾಳಮೋಕ್ಷ ಮಾಡಿದ್ದಾರೆ.

ಕಚೇರಿಗೆ ಬಂದಿದ್ದ ಮಹಿಳೆಯೋರ್ವಳು ತನ್ನ ಜೊತೆಗೆ ಮಗುವನ್ನು ಕರೆತಂದಿದ್ದಕ್ಕಾಗಿ ಆಕೆಗೂ ಸಿಂಗ್ ಕಪಾಳಮೋಕ್ಷ ಮಾಡಿದ್ದು,ಕಚೇರಿಯಲ್ಲಿದ್ದ ಇತರರು ಆಕೆಯ ರಕ್ಷಣೆಗಾಗಿ ಮಧ್ಯಪ್ರವೇಶ ಮಾಡಿದ್ದನ್ನು ಮತ್ತು ಸಿಂಗ್ ಹಾಗೂ ಮಹಿಳೆಯ ನಡುವೆ ಬಿರುಸಿನ ವಾಗ್ವಾದ ನಡೆದಿದ್ದನ್ನೂ ವೀಡಿಯೊ ತೋರಿಸಿದೆ.

ಸಿಂಗ್ ಗಂಭೀರ ಕಾನೂನು ತೊಂದರೆಗಳನ್ನು ಎದುರಿಸುತ್ತಿರುವ ಬೆನ್ನಿಗೇ ಈ ವೀಡಿಯೊ ಹೊರಬಿದ್ದಿದೆ. ಈ ತಿಂಗಳ ಆರಂಭದಲ್ಲಿ 22ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಸಿಂಗ್ ವಿರುದ್ಧ ಕಪುರ್ತಲಾ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾಗಿದ್ದರೂ ಅಧಿಕಾರಿಗಳು ಈವರೆಗೆ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ವೀಡಿಯೊಕ್ಕೆ ಪ್ರತಿಕ್ರಿಯಿಸಿರುವ ಎಕ್ಸ್ ಬಳಕೆದಾರ ಗೌರವ್ ಯಾದವ್ ’ಇಂತಹ ವಂಚಕರನ್ನು ತಕ್ಷಣ ಹೊಣೆಗಾರರನ್ನಾಗಿಸಬೇಕು. ಇಲ್ಲಿ ಇತ್ತೀಚಿನ ಮಾಹಿತಿ ಏನಾದರೂ ಇದೆಯೇ? ಯಾವುದಾದರೂ ಗಂಭೀರ ಘಟನೆ ನಡೆಯುವುದನ್ನು ನಾವು ಕಾಯುತ್ತಿದ್ದೇವೆಯೇ?’ಎಂದು ಪ್ರಶ್ನಿಸಿದ್ದಾರೆ. ತನ್ನ ಪೋಸ್ಟ್ನ್ನು ಅವರು ಪೋಲಿಸ್ ಮಹಾ ನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.

ಸಿಂಗ್ ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಮಾ.2ರಂದು ಜಲಂಧರದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಅವರು, ತನ್ನ ವಿರುದ್ಧದ ಆರೋಪಗಳನ್ನು ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿ ಹಾಕಿದ್ದಾರೆ. ದೂರುದಾರ ಯುವತಿಯನ್ನು ತನ್ನ‘ಮಗಳು’ ಎಂದು ಬಣ್ಣಿಸಿದ್ದ ಅವರು, ಆಕೆಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವಾಗಿದೆ ಎಂದಿದ್ದರು.

ಸಿಸಿಟಿವಿ ತುಣುಕು ಹೊರಬಿದ್ದ ಬಳಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸಿಂಗ್ ವಿರುದ್ಧ ತಕ್ಷಣ ಪೋಲಿಸ್ ಕ್ರಮಕ್ಕೆ ಆಗ್ರಹಗಳು ಹೆಚ್ಚಿವೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News