ಕೇರಳ ಬಿಜೆಪಿ ಮುಖ್ಯಸ್ಥರಾಗಿ ರಾಜೀವ್ ಚಂದ್ರಶೇಖರ್?

Update: 2025-03-23 19:50 IST

ರಾಜೀವ್ ಚಂದ್ರಶೇಖರ್ | PTI

ತಿರುವನಂತಪುರಂ: ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ರವಿವಾರ ಕೇರಳ ಬಿಜೆಪಿ ಮುಖ್ಯಸ್ಥ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಹುದ್ದೆಗೆ ತಮ್ಮ ನಾಮಪತ್ರ ಸಲ್ಲಿಸಿರುವ ಏಕೈಕ ಅಭ್ಯರ್ಥಿಯಾಗಿರುವ ಅವರು, ರಾಜ್ಯ ಬಿಜೆಪಿ ಘಟಕವನ್ನು ಮುನ್ನಡೆಸಲು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಪಕ್ಷದ ಪತ್ರಿಕಾಗೋಷ್ಠಿಯ ನಂತರ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಧಿಕೃತವಾಗಿ ಅವರ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಕೇರಳ ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ಈ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿಯವರ ಎರಡನೇ ಅವಧಿಯ ಕೇಂದ್ರ ಸರಕಾರಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್ ಅವರು ರವಿವಾರ ಬೆಳಿಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ನಾಮಪತ್ರ ಸಲ್ಲಿಸಿದರು.

ಪ್ರಸಕ್ತ, ಕೇರಳ ಬಿಜೆಪಿ ಮುಖ್ಯಸ್ಥರಾಗಿರುವ ಕೆ. ಸುರೇಂದ್ರನ್ ಅವರ ಅವಧಿ ಈಗಾಗಲೇ ಮುಗಿದಿದೆ. ಕಳೆದ ವರ್ಷ ನವೆಂಬರ್ನಲ್ಲಿ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಸೋತ ನಂತರ ಸುರೇಂದ್ರನ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಪಕ್ಷದ ಸೋಲಿಗೆ ಅವರನ್ನು ಹೊಣೆಯನ್ನಾಗಿ ಮಾಡಲಾಗಿತ್ತು.

ರಾಜೀವ್ ಚಂದ್ರಶೇಖರ್ ಅವರು 2023 ರಿಂದ 2024 ರವರೆಗೆ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ, ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಶಶಿ ತರೂರ್ ವಿರುದ್ಧ 16,077 ಮತಗಳ ಅಂತರದಿಂದ ಸೋತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News