ಜಾಗತಿಕ ಮಾರುಕಟ್ಟೆಯಲ್ಲಿ ಗೋಲಿ ಸೋಡಾಗೆ ಹೆಚ್ಚಿದ ಬೇಡಿಕೆ : ಕೇಂದ್ರ ಸರಕಾರ

PC : thehindu.com
ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸಾಂಪ್ರದಾಯಿಕ ಪಾನೀಯ ಗೋಲಿ ಸೋಡಾಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ರವಿವಾರ ತಿಳಿಸಿದೆ.
ಗಲ್ಫ್ ಪ್ರಾಂತ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಲುಲು ಹೈಪರ್ ಮಾರ್ಕೆಟ್ ಸಂಸ್ಥೆಯು ಗೋಲಿ ಪಾಪ್ ಸೋಡಾ ರೀ ಬ್ರಾಂಡ್ ನಡಿ ಭಾರತದ ಗೋಲಿ ಸೋಡಾವನ್ನು ಮಾರಾಟ ಮಾಡುತ್ತಿದೆ ಎಂದು ತಿಳಿಸಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ, ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಗ್ರಾಹಕರು ಕೇಳಿ ಪಡೆಯುತ್ತಿದ್ದ ಗೋಲಿ ಸೋಡಾ, ಬದಲಾದ ಮಾರುಕಟ್ಟೆಯ ಸನ್ನಿವೇಶದಲ್ಲಿ ಅಮೆರಿಕ, ಬ್ರಿಟನ್ ಮತ್ತು ಗಲ್ಫ್ ದೇಶಗಳಲ್ಲಿ ಗ್ರಾಹಕರನ್ನು ತಲುಪುತ್ತಿದೆ. ಸರಕಾರದ ರಫ್ತು ಉತೇಜನದಿಂದ ಬಹುರಾಷ್ಟ್ರೀಯ ಕಂಪೆನಿಗಳ ಪ್ರಾಬಲ್ಯದಿಂದ ಕಣ್ಮರೆಯಾಗುತ್ತಿದ್ದ ಗೋಲೀ ಸೋಡಾ ಸೀಮೋಲ್ಲಂಘನೆ ಮಾಡಿದೆ. ಆ ಮೂಲಕ ವಿದೇಶಿ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಎಪಿಇಡಿಎ ತಿಳಿಸಿದೆ.