ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ನೇಹಾ ಭಾರ್ತಿ; ಜಾಮಾ ಮಸೀದಿಯಲ್ಲಿ ಇಫ್ತಾರ್ ಆಯೋಜನೆ
ಹೊಸದಿಲ್ಲಿ: ದಿಲ್ಲಿಯ ನೇಹಾ ಭಾರ್ತಿ ಎಂಬ ಯುವತಿ ಪ್ರೀತಿಯ ಅಂಗಡಿ ತೆರೆದು ಮಾದರಿಯಾದವರು. ರಮದಾನ್ ಉಪವಾಸದ ಸಂದರ್ಭದಲ್ಲಿ ನೇಹಾ ಭಾರ್ತಿ ಮತ್ತು ಅವರ ತಂಡ ದಿಲ್ಲಿಯ ಜಾಮಿಯಾ ಮಸೀದಿಯಲ್ಲಿ ಪ್ರತೀದಿನ ಇಫ್ತಾರ್ ಕೂಟ ಆಯೋಜಿಸುತ್ತಿದ್ದಾರೆ.
ಪ್ರೀತಿಯಿಂದ ಮಾತ್ರ ದ್ವೇಷವನ್ನು ಎದುರಿಸಲು ಸಾಧ್ಯ. ಪರಸ್ಪರ ಧರ್ಮಗಳ ಆಚಾರ, ಸಂಪ್ರದಾಯಗಳನ್ನು ಗೌರವಿಸಬೇಕು ಎನ್ನುತ್ತಾರೆ ನೇಹಾ ಭಾರ್ತಿ.
ಅಂದಹಾಗೆ ಪ್ರತಿ ದಿನ ಇಫ್ತಾರ್ ಆಹಾರ ವಿತರಿಸುತ್ತಿರುವ ನೇಹಾ ಮತ್ತು ಅವರ ತಂಡಕ್ಕೆ ಹಲವು ಹಿಂದೂಗಳು ಕೂಡಾ ಧನ ಸಹಾಯ ಮಾಡುತ್ತಿದ್ದಾರೆ ಎಂದು ನೇಹಾ ತಿಳಿಸಿದ್ದಾರೆ. ನೇಹಾ, ಅವರ ಅತ್ತಿಗೆ ರಣಿತ ಸಿಂಗ್ ಭಾರ್ತಿ ಮತ್ತು ಅವರ ಸ್ನೇಹಿತ ರಣೇಶ್ ನೂರ್ ತಮ್ಮ ಇತರ ಸ್ನೇಹಿತರೊಂದಿಗೆ ಸೇರಿಕೊಂಡು ಈ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ .
ನೇಹಾ ಮೂರು ವರ್ಷಗಳಿಂದ ರಂಝಾನ್ ತಿಂಗಳಲ್ಲಿ ಪ್ರತಿ ಸಂಜೆ ನೂರಾರು ಉಪವಾಸಿಗರಿಗೆ ಇಫ್ತಾರ್ ಕೂಟ ಆಯೋಜಿಸುತ್ತಿದ್ದಾರೆ. 'ಇಂತಹ ಕಾರ್ಯಗಳು ಹೆಚ್ಚಾಗಿ ನಡೆಯಲಿ, ಈ ಮೂಲಕ ಮುಂದೊಂದು ದಿನ ನಾವು ದ್ವೇಷವನ್ನು ಅಳಿಸಿ ಹಾಕಬಲ್ಲೆವು ಎಂಬ ಭರವಸೆ ನನಗಿದೆ" ಎನ್ನುತ್ತಾರೆ ನೇಹಾ.
ದಿಲ್ಲಿಯ ಚಾದ್ರಿ ಬಜಾರ್ ನಿವಾಸಿಯಾಗಿರುವ ನೇಹಾ ಕಾರ್ಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.