ಉತ್ತರ ಪ್ರದೇಶ | ಹಿಂಸಾಚಾರ ಪ್ರಕರಣ; ಸಂಭಲ್ ಮಸೀದಿಯ ಅಧ್ಯಕ್ಷ ಎಸ್ಐಟಿ ವಶಕ್ಕೆ
ಝಾಫರ್ ಅಲಿ | PC : ANI \ X
ಸಂಭಲ್: ನವೆಂಬರ್ 24ರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ದಾಖಲಿಸಿಕೊಳ್ಳಲು ಇಲ್ಲಿನ ಜಾಮಾ ಮಸೀದಿಯ ಅಧ್ಯಕ್ಷ ಝಾಫರ್ ಅಲಿ ಅವರನ್ನು ಸ್ಥಳೀಯ ಪೊಲೀಸ್ ನ ವಿಶೇಷ ತನಿಖಾ ತಂಡ (ಎಸ್ಐಟಿ) ವಶಕ್ಕೆ ತೆಗೆದುಕೊಂಡಿದೆ.
ಇಲ್ಲಿನ ಮೊಗಲ್ ಯುಗದ ಮಸೀದಿಯು ಪ್ರಾಚೀನ ಹಿಂದೂ ದೇವಾಲಯದ ನಿವೇಶನವಾಗಿತ್ತು ಎಂದು ಪ್ರತಿಪಾದಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾದ ಬಳಿಕ ಇದು ವಿವಾದದ ಪ್ರಮುಖ ಕೇಂದ್ರವಾಗಿದೆ.
ಮಸೀದಿಯ ಅಧ್ಯಕ್ಷರನ್ನು ಬಂಧಿಸಲಾಗಿದೆಯೇ ಎಂಬ ಸುದ್ದಿ ಸಂಸ್ಥೆಯೊಂದರ ಪ್ರಶ್ನೆಗೆ ಸಂಭಲ್ ಕೊತವಾಲಿಯ ಉಸ್ತುವಾರಿ ಅನುಜ್ ಕುಮಾರ್ ತೋಮರ್, ‘‘ಹೇಳಿಕೆ ದಾಖಲಿಸಿಕೊಳ್ಳಲು ವಿಶೇಷ ತನಿಖಾ ತಂಡ ಅವರನ್ನು ವಶಕ್ಕೆ ತೆಗೆದುಕೊಂಡಿದೆ’’ಎಂದು ತಿಳಿಸಿದ್ದಾರೆ.
ನವೆಂಬರ್ 24ರ ಹಿಂಸಾಚಾರಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲಿ ಅವರನ್ನು ಅದೇ ಪ್ರಕರಣದಲ್ಲಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿದ್ದಾರೆ.
ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಕಳೆದ ವರ್ಷ ನವೆಂಬರ್ 24ರಂದು ನಡೆದ ಪ್ರತಿಭಟನೆ ಸಂದರ್ಭ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರ ಹಲವರು ಗಾಯಗೊಂಡಿದ್ದರು.