ಜಮ್ಮುಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ಪತ್ತೆ
PC : PTI
ಜಮ್ಮು: ಜಮ್ಮುಕಾಶ್ಮೀರದ ದೋಡಾ ಜಿಲ್ಲೆಯ ದುರ್ಗಮ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುದಾಣವೊಂದು ಪತ್ತೆಯಾಗಿದ್ದು, ಒಂದು ಪಿಸ್ತೂಲು ಮತ್ತು ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ಶನಿವಾರ ಭದೇರ್ವಾದ ಭಲ್ರಾ ಅರಣ್ಯ ಪ್ರದೇಶದಲ್ಲಿ ಸ್ಥಳೀಯ ಪೋಲಿಸರ ವಿಶೇಷ ಕಾರ್ಯಾಚರಣೆ ಗುಂಪು(ಎಸ್ಒಜಿ) ಮತ್ತು ಸೇನೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಉಗ್ರರ ಅಡಗುದಾಣ ಪತ್ತೆಯಾಗಿದೆ ಎಂದು ತಿಳಿಸಿದ ಅಧಿಕಾರಿಗಳು, ಸಂಶಯಾಸ್ಪದ ಚಲನವಲನಗಳ ವರದಿಗಳ ಬಳಿಕ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ನಡೆಸಲಾದ ಕಾರ್ಯಾಚರಣೆ ಸಂದರ್ಭ ಯಾರನ್ನೂ ಬಂಧಿಸಲಾಗಿಲ್ಲ ಎಂದು ಹೇಳಿದರು.
ಈ ನಡುವೆ ನೆರೆಯ ಕಿಷ್ತ್ವಾರ್ ಜಿಲ್ಲೆಯ ಗುರಿನಾಲ್, ಥಾಥ್ರಿ ಮತ್ತು ಛಟ್ರೂ ಅರಣ್ಯ ಪ್ರದೇಶಗಳಲ್ಲಿ ಪೋಲಿಸ್, ಸಿಆರ್ಪಿಎಫ್ ಮತ್ತು ಸೇನೆಯ ಜಂಟಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಎತ್ತರದ ಪ್ರದೇಶಗಳಲ್ಲಿ ಶಂಕಿತ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಕೆಲವು ಗ್ರಾಮಸ್ಥರು ಮಾಹಿತಿಗಳನ್ನು ಹಂಚಿಕೊಂಡ ಬಳಿಕ ಗುರುವಾರ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಈವರೆಗೆ ಶಂಕಿತ ವ್ಯಕ್ತಿಗಳ ಸುಳಿವು ಲಭ್ಯವಾಗಿಲ್ಲ ಎಂದೂ ಅಧಿಕಾರಿಗಳು ತಿಳಿಸಿದರು.