ಆ್ಯಸಿಡ್ ದಾಳಿ ಸಂತ್ರಸ್ತರು ಪರಿಹಾರಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು: ಸುಪ್ರೀಂ

ಸುಪ್ರೀಂ | PTI
ಹೊಸದಿಲ್ಲಿ: ಆ್ಯಸಿಡ್ ದಾಳಿ ಸಂತ್ರಸ್ತರು ಪರಿಹಾರವನ್ನು ಸ್ವೀಕರಿಸಲು ವಿಳಂಬವಾಗುತ್ತಿದ್ದರೆ ತಮ್ಮ ರಾಜ್ಯಗಳ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರು ಅಧಿಕಾರಿಗಳಿಂದ ಪರಿಹಾರವನ್ನು ಪಡೆಯುವುದು ಕಷ್ಟವಾಗಿದೆ ಎಂದು ಮುಂಬೈನ ಎನ್‌ಜಿಒ ‘ಆ್ಯಸಿಡ್ ಸರ್ವೈವರ್ಸ್ ಸಾಹಸ್ ಫೌಂಡೇಷನ್’ ಪರ ವಕೀಲರು ಪೀಠಕ್ಕೆ ನಿವೇದನೆ ಮಾಡಿಕೊಂಡಾಗ ಮುಖ್ಯ ನ್ಯಾಯಮೂರ್ತಿಗಳು, ಅಂತಹ ಸಂದರ್ಭದಲ್ಲಿ ಅವರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ಮುಕ್ತರಾಗಿದ್ದಾರೆ ಎಂದು ಹೇಳಿದರು.
ಆ್ಯಸಿಡ್ ದಾಳಿ ಸಂತ್ರಸ್ತರು ಅಥವಾ ಅವರ ಕುಟುಂಬದವರು ಪರಿಹಾರವನ್ನು ಕೋರಿದ ಸಮಯ ಮತ್ತು ಅವರಿಗೆ ಪರಿಹಾರವನ್ನು ಪಾವತಿಸಿದ ದಿನಾಂಕದ ವಿವರಗಳನ್ನು ಕಾಯ್ದಿಡುವಂತೆ ಸರ್ವೋಚ್ಚ ನ್ಯಾಯಾಲಯವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ನಿರ್ದೇಶ ನೀಡಿತು.
ಎನ್‌ಜಿಒದ ಅರ್ಜಿಗೆ ಕೇಂದ್ರ ಮತ್ತು 11 ರಾಜ್ಯಗಳು ತಮ್ಮ ಉತ್ತರಗಳನ್ನು ಸಲ್ಲಿಸಿಲ್ಲ ಎನ್ನುವುದನ್ನು ಗಮನಿಸಿದ ಪೀಠವು, ಅದಕ್ಕಾಗಿ ಅವುಗಳಿಗೆ ನಾಲ್ಕು ವಾರಗಳ ಸಮಯಾವಕಾಶವನ್ನು ನೀಡಿತು ಮತ್ತು ವಿಚಾರಣೆಯನ್ನು ಮೇ ತಿಂಗಳಿಗೆ ಮುಂದೂಡಿತು.
ಸರ್ವೋಚ್ಚ ನ್ಯಾಯಾಲಯವು 2014ರಲ್ಲಿ ಲಕ್ಷ್ಮಿ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ಹೊರಡಿಸಲಾಗಿದ್ದ ನ್ಯಾಯಾಲಯದ ನಿರ್ದೇಶನಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಕೋರಿ ಎನ್‌ಜಿಒ 2023ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.