ರಾಜಧಾನಿ ದಿಲ್ಲಿಯ ಪ್ರತಿಷ್ಠಿತ ಕಟ್ಟಡಗಳು ಅಗ್ನಿ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲ; ವರದಿ

ಜಿ20 ಸಭೆ ನಡೆದಿದ್ದ ವಿಶ್ವದರ್ಜೆಯ ಸಭಾಂಗಣ ಭಾರತ ಮಂಟಪಂ (PTI)
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಹಲವಾರು ಪ್ರತಿಷ್ಠಿತ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಯ ಕೊರತೆಯಿರುವುದರಿಂದ ಸುರಕ್ಷತಾ ಪ್ರಮಾಣಪತ್ರಕ್ಕಾಗಿ ಅವು ಸಲ್ಲಿಸಿದ್ದ ಅರ್ಜಿಗಳನ್ನು ದಿಲ್ಲಿ ಅಗ್ನಿಶಾಮಕ ಸೇವಾ ಇಲಾಖೆ(ಡಿಎಫ್ಎಸ್)ಯು ತಿರಸ್ಕರಿಸಿದೆ ಎಂದು tribuneindia.com ವರದಿ ಮಾಡಿದೆ.
ಸಂವಿಧಾನ ಸದನ(ಹಳೆಯ ಸಂಸತ್),2023ರ ಜಿ20 ಸಭೆ ನಡೆದಿದ್ದ ವಿಶ್ವದರ್ಜೆಯ ಸಭಾಂಗಣ ಭಾರತ ಮಂಟಪಂ ಮತ್ತು ಸಂಸದ್ ಮಾರ್ಗದಲ್ಲಿರುವ RBI ಕಟ್ಟಡ ಇವುಗಳಲ್ಲಿ ಸೇರಿವೆ. ಭಾರತ ಮಂಟಪಂ ಡಿಎಫ್ಎಸ್ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ)ವನ್ನು ಹೊಂದಿದೆಯಾದರೂ, ಎ2ದಿಂದ ಎ5ವರೆಗೆ ಸೇರಿದಂತೆ ಕೆಲವು ನೂತನವಾಗಿ ನಿರ್ಮಿತ ಸಭಾಂಗಣಗಳು ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ. ಡಿಎಫ್ಎಸ್ ಎನ್ಒಸಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಿಸಬೇಕಾಗುತ್ತದೆ.
ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಅಧಿಕೃತ ದಾಖಲೆಯ ಪ್ರಕಾರ, ಡಿಎಫ್ಎಸ್ ಹಳೆಯ ಸಂವಿಧಾನ ಕಟ್ಟಡದಲ್ಲಿಯ ಹಲವಾರು ನ್ಯೂನತೆಗಳನ್ನು ಗುರುತಿಸಿದ್ದು,ಇದು ಅದರ ಎನ್ಒಸಿ ಅರ್ಜಿಯನ್ನು ತಿರಸ್ಕರಿಸಲು ಕಾರಣವಾಗಿದೆ. ಈ ನ್ಯೂನತೆಗಳಲ್ಲಿ ಅಗ್ನಿ ತುರ್ತು ಸಂದರ್ಭದಲ್ಲಿ ಜನರ ಚಲನವಲನ ಮತ್ತು ತೆರವುಗೊಳಿಸುವಿಕೆಗೆ ಅಡ್ಡಿಯನ್ನುಂಟು ಮಾಡಬಹುದಾದ ನಿರ್ಬಂಧಿತ ಕಾರಿಡಾರ್ ಗಳು ಮತ್ತು ಮೆಟ್ಟಿಲುಗಳು ಸೇರಿವೆ.
ಭಾರತ ಮಂಟಪಂ ಪ್ರಕರಣದಲ್ಲಿ ಡಿಎಫ್ಎಸ್ ಅದರ ಆಡಳಿತ ಮಂಡಳಿ ಐಟಿಪಿಒಗೆ,ಹೊಸದಾಗಿ ನಿರ್ಮಾಣಗೊಂಡಿರುವ ಎ2ದಿಂದ ಎ5ವರೆಗಿನ ಸಭಾಂಗಣಗಳ ಬಳಕೆಯ ವೇಳೆ ಏನಾದರೂ ಅವಘಡ ಸಂಭವಿಸಿದರೆ ಹೊಣೆಗಾರಿಕೆ ಅದರದೇ ಆಗಿರುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ. 2,700 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭಾರತ ಮಂಟಪಂ 1.4 ಲಕ್ಷ ಚ.ಮೀ.ವಿಸ್ತೀರ್ಣದ ಪ್ರದರ್ಶನ ಪ್ರದೇಶವನ್ನು ಹೊಂದಿದ್ದು,ಭಾರತದಲ್ಲಿ ಅತ್ಯಂತ ದೊಡ್ಡದಾಗಿದೆ ಮತ್ತು ವಿಶ್ವದಲ್ಲಿಯ ಬೃಹತ್ ಸಭಾಂಗಣ ಪ್ರದೇಶಗಳಲ್ಲಿ ಒಂದಾಗಿದೆ.
ಹಳೆಯ ಸಂಸತ್ ಅಧಿಕಾರಿಗಳು ಗ್ರಂಥಾಲಯ ಕಟ್ಟಡ, ಸಂವಿಧಾನ ಸದನ,ಸಂಸತ್ ಭವನದ ಇತರ ಕಟ್ಟಡಗಳು ಮತ್ತು ಅವುಗಳ ವಿಸ್ತರಣೆಗೆ ಅಗ್ನಿ ಸುರಕ್ಷತಾ ಪ್ರಮಾಣಪತ್ರವನ್ನು ಕೋರಿದ್ದರು. ಡಿಎಫ್ಎಸ್ನ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಲ್ಲಿಯೂ ಸುರಕ್ಷತಾ ಕೊರತೆಗಳು ಕಂಡು ಬಂದಿವೆ.
ಹಳೆಯ ಸಂಸತ್ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಡಿಎಫ್ಎಸ್ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ತಾನು 2021ರಲ್ಲಿಯೂ ಹಲವಾರು ನ್ಯೂನತೆಗಳನ್ನು ಗುರುತಿಸಿದ್ದೆ,ಆದರೆ ಅವುಗಳನ್ನು ಈವರೆಗೂ ಸರಿಪಡಿಸಲಾಗಿಲ್ಲ ಎಂದು ಎತ್ತಿ ತೋರಿಸಿದೆ.
ಡಿಎಫ್ಎಸ್ ಮಾ.10ರಂದು ಆರ್ಬಿಐ ಕಟ್ಟಡವನ್ನು ಪರಿಶೀಲಿಸಿದ್ದು,ಏರ್ ಹ್ಯಾಂಡ್ಲಿಂಗ್ ಘಟಕಗಳಲ್ಲಿ ಬೆಂಕಿ ಪತ್ತೆ ಉಪಕರಣಗಳನ್ನು ಅಳವಡಿಸಲಾಗಿಲ್ಲ,ಸ್ಪ್ರಿಂಕ್ಲರ್ಗಳನ್ನು ನೆಲಮಾಳಿಗೆಯಲ್ಲಿ ಕೊಠಡಿಗಳು ಮತ್ತು ಕಚೇರಿಗಳಿಗೆ ವಿಸ್ತರಿಸಲಾಗಿಲ್ಲ ಮತ್ತು ಅಲ್ಲಿ ಹೊಗೆ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿಲ್ಲ ಎನ್ನುವುದು ಕಂಡು ಬಂದಿದೆ.