ಬಿಹಾರ: ವಕ್ಫ್ ಮಸೂದೆ ಬೆಂಬಲಿಸಿದ್ದಕ್ಕೆ ನಿತೀಶ್ ಕುಮಾರ್ ಆಯೋಜಿಸಿದ ಇಫ್ತಾರ್ ಕೂಟ ಬಹಿಷ್ಕರಿಸಿದ ಮುಸ್ಲಿಂ ಸಂಘಟನೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (PTI)
ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಕ್ಫ್ ಮಸೂದೆಗೆ ಬೆಂಬಲ ನೀಡಿರುವುದನ್ನು ಪ್ರತಿಭಟಿಸಿ, ಅವರು ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಹಾರದ ಪ್ರಮುಖ ಮುಸ್ಲಿಂ ಸಂಘಟನೆಯೊಂದು ಶನಿವಾರ ಪ್ರಕಟಿಸಿದೆ.
ಬಿಹಾರ, ಜಾರ್ಖಂಡ್ ಹಾಗೂ ಒಡಿಶಾದಲ್ಲಿ ಗಮನಾರ್ಹ ಪ್ರಮಾಣದ ಬೆಂಬಲಿಗರನ್ನು ಹೊಂದಿರುವ ಇಮಾರತ್ ಶರಯ್ಯ ಸಂಘಟನೆಯು, ರವಿವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ ಆಯೋಜನೆಗೊಂಡಿರುವ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವಂತೆ ನೀಡಲಾಗಿರುವ ಆಮಂತ್ರಣದ ಕುರಿತ ತನ್ನ ಪ್ರತಿಕ್ರಿಯೆಯ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
“ಮಾರ್ಚ್ 23ರಂದು ನಡೆಯಲಿರುವ ಸರಕಾರಿ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ ಕೈಗೊಳ್ಳಲಾಗಿದೆ. ನೀವು ವಕ್ಫ್ ಮಸೂದೆಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಈ ಮಸೂದೆಯಿಂದ ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆ ಮತ್ತಷ್ಟು ಹದಗೆಡುವ ಭೀತಿ ಎದುರಾಗಿದೆ” ಎಂದು ಆ ಪತ್ರದಲ್ಲಿ ಹೇಳಲಾಗಿದೆ.
“ನೀವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಜಾತ್ಯತೀತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೇರಿದ್ದೀರಿ. ಆದರೆ ಬಿಜೆಪಿಯೊಂದಿಗಿನ ನಿಮ್ಮ ಮೈತ್ರಿ ಹಾಗೂ ಅಸಾಂವಿಧಾನಿಕ ಮತ್ತು ಅತಾರ್ಕಿಕವಾದ ಶಾಸನಕ್ಕೆ ನೀವು ನೀಡಿರುವ ಬೆಂಬಲವು ನಿಮ್ಮ ಬದ್ಧತೆಗಳ ವಿರುದ್ಧ ಸಂಘರ್ಷ ನಡೆಸುತ್ತಿದೆ” ಎಂದು ಇಮಾರತ್ ಶರಯ್ಯ ಸಂಘಟನೆ ಆರೋಪಿಸಿದೆ.
ಮುಖ್ಯಮಂತ್ರಿಗಳು ಆಯೋಜಿಸಿರುವ ಇಫ್ತಾರ್ ಕೂಟವನ್ನು ಓಲೈಕೆ ಎಂದು ಬಣ್ಣಿಸಿರುವ ಇಮಾರತ್ ಶರಯ್ಯ ಸಂಘಟನೆ, “ಮುಸ್ಲಿಮರ ಕಳವಳದ ಕುರಿತು ನಿಮ್ಮ ಸರಕಾರ ತಳೆದಿರುವ ಉದಾಸೀನತೆಯು ಇಂತಹ ಔಪಚಾರಿಕ ಸಭೆಗಳನ್ನು ಅರ್ಥಹೀನವಾಗಿಸಿದೆ” ಎಂದೂ ಟೀಕಿಸಿದೆ.
ಈ ಬೆಳವಣಿಗೆಯ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಲಿ ಅಥವಾ ಅವರ ಜೆಡಿಯು ಪಕ್ಷವಾಗಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರ ಹಾಗೂ ಕೇಂದ್ರಗಳೆರಡರಲ್ಲೂ ಆಡಳಿತಾರೂಢ ಜೆಡಿಯು ಪಕ್ಷವು ಬಿಜೆಪಿಯೊಂದಿಗೆ ಅಧಿಕಾರದಲ್ಲಿದೆ.