ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ: ಆರೆಸ್ಸೆಸ್

Photo credit: PTI
ಬೆಂಗಳೂರು: ರಾಜ್ಯ ಸರಕಾರ ಸರಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಒದಗಿಸಿರುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಂವಿಧಾನವು ಧರ್ಮಾಧಾರಿತ ಮೀಸಲಾತಿಗೆ ಅವಕಾಶ ನೀಡುವುದಿಲ್ಲ. ಇಂತಹ ಮೀಸಲಾತಿಗಳು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿವೆ ಎಂದು ರವಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತ್ಯುನ್ನತ ನೀತಿ ನಿರ್ಧಾರಕ ಅಂಗವಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಮಾರೋಪ ದಿನವಾದ ರವಿವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಯನ್ನು ಅಂಗೀಕರಿಸಲಾಗಿಲ್ಲ. ಯಾರಾದರೂ ಇದನ್ನು ಮಾಡುತ್ತಿದ್ದರೆ, ಅದು ಸಂವಿಧಾನ ಶಿಲ್ಪಿಗೆ ವಿರುದ್ಧವಾದುದಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿಯನ್ನು ಪರಿಚಯಿಸಿದ್ದ ಅವಿಭಜಿತ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳ ಪ್ರಯತ್ನಗಳನ್ನು ಹೈಕೋರ್ಟ್ ಗಳು ಹಾಗೂ ಸುಪ್ರೀಂ ಕೋರ್ಟ್ ಬದಿಗಿರಿಸಿದ ಕ್ರಮಗಳ ಬಗ್ಗೆಯೂ ಅವರು ಉಲ್ಲೇಖಿಸಿದರು. ಇಂತಹ ಧರ್ಮಾಧಾರಿತ ಮೀಸಲಾತಿಯನ್ನು ನ್ಯಾಯಾಲಯಗಳು ತಳ್ಳಿ ಹಾಕಿವೆ ಎಂದು ಹೊಸಬಾಳೆ ಪ್ರತಿಪಾದಿಸಿದರು.
ಮಹಾರಾಷ್ಟ್ರದಲ್ಲಿನ 17ನೇ ಶತಮಾನದ ಮುಘಲ್ ದೊರೆ ಔರಂಗಜೇಬ್ ಸಮಾಧಿಯ ವಿವಾದದ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಔರಂಗಜೇಬ್ ನನ್ನು ಅಸ್ಮಿತೆಯನ್ನಾಗಿಸಲಾಗಿದೆಯೆ ಹೊರತು, ಸಾಮಾಜಿಕ ಸಾಮರಸ್ಯದಲ್ಲಿ ವಿಶ್ವಾಸವಿರಿಸಿದ್ದ ಆತನ ಸಹೋದರ ದಾರಾ ಶಿಕೊ ಅವರನ್ನಲ್ಲ ಎಂದು ಹೇಳಿದರು.
ಭಾರತದ ನೈತಿಕತೆಗೆ ವಿರುದ್ಧವಾಗಿ ನಡೆದ ವ್ಯಕ್ತಿಗಳನ್ನು ದೇಶದ ಅಸ್ಮಿತೆಗಳನ್ನಾಗಿಸಲಾಗಿದೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಮುಘಲ್ ದೊರೆ ಅಕ್ಬರ್ ವಿರುದ್ಧ ಪ್ರತಿರೋಧ ತೋರಿದ ರಾಜಸ್ಥಾನದ ರಾಜ ಮಹಾರಾಣಾ ಪ್ರತಾಪ್ ರಂಥ ವ್ಯಕ್ತಿಗಳನ್ನು ದತ್ತಾತ್ರೇಯ ಹೊಸಬಾಳೆ ಶ್ಲಾಘಿಸಿದರು. ದಾಳಿಕೋರ ಮನೋಭಾವ ಹೊಂದಿರುವವರು ಭಾರತದ ಪಾಲಿಗೆ ಬೆದರಿಕೆಯಾಗಿದ್ದಾರೆ. ಯಾರು ಭಾರತದ ನೈತಿಕತೆಯೊಂದಿಗಿದ್ದರೋ, ಅಂಥವರ ಜೊತೆ ನಾವು ನಿಲ್ಲಬೇಕಿದೆ ಎಂದು ಅವರು ಹೇಳಿದರು.