ಸ್ತನವನ್ನು ಸ್ಪರ್ಷಿಸುವುದು ಲೈಂಗಿಕ ದೌರ್ಜನ್ಯ; ಅತ್ಯಾಚಾರವಲ್ಲ: ಅಲಹಾಬಾದ್ ಹೈಕೋರ್ಟ್

Update: 2025-03-20 20:53 IST
Allahabad High Court

ಅಲಹಾಬಾದ್ ಹೈಕೋರ್ಟ್ | ANI 

  • whatsapp icon

ಪ್ರಯಾಗ್ ರಾಜ್: 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದುಕೊಳ್ಳುವುದು, ಆಕೆಯ ಪೈಜಾಮಾದ ದಾರವನ್ನು ತುಂಡರಿಸುವುದು ಹಾಗೂ ಆಕೆಯನ್ನು ಮೋರಿಯ ಕೆಳಗೆ ಎಳೆದೊಯ್ಯುವುದು ತೀವ್ರ ಸ್ವರೂಪದ ಲೈಂಗಿಕ ದೌರ್ಜನ್ಯವೇ ಹೊರತು, ಅತ್ಯಾಚಾರ ಪ್ರಯತ್ನ ಅಥವಾ ಅತ್ಯಾಚಾರವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಈ ಘಟನೆಯು 2021ರಲ್ಲಿ ನಡೆದಿದ್ದು, ಆರೋಪಿಗಳಾದ ಪವನ್ ಹಾಗೂ ಆಕಾಶ್ ಎಂಬುವವರು 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದಕ್ಕೂ ಮುನ್ನ, ಆಕೆಗೆ ತಮ್ಮ ವಾಹನದಲ್ಲಿ ಲಿಫ್ಟ್ ನೀಡಿದ್ದರು. ಆದರೆ, ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯವನ್ನು ನೋಡಿದ ದಾರಿಹೋಕರು ಬಾಲಕಿಯ ನೆರವಿಗೆ ಧಾವಿಸುತ್ತಿದ್ದಂತೆಯೆ, ಅವರಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.

ಆರಂಭದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 18ರ ಅಡಿ ವಿಚಾರಣೆ ನಡೆಸಬೇಕು ಎಂದು ಕಸ್ಗಂಜ್ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಮಾರ್ಪಡಿಸಿರುವ ರಾಮ್ ಮನೋಹರ್ ಮಿಶ್ರಾ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠವು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-ಬಿ (ವಸ್ತ್ರಾಪಹರಣ ನಡೆಸುವ ಉದ್ದೇಶದೊಂದಿಗೆ ಹಲ್ಲೆ ಅಥವಾ ಕ್ರಿಮಿನಲ್ ಬಲತ್ಕಾರ)ದೊಂದಿಗೆ ಪೋಕ್ಸೊ ಕಾಯ್ದೆಯ ಸೆಕ್ಷನ್ 9 ಹಾಗೂ 10(ತೀವ್ರ ಸ್ವರೂಪದ ಲೈಂಗಿಕ ದೌರ್ಜನ್ಯ)ರ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆದೇಶಿಸಿದೆ. ಈ ವೇಳೆ, ಅತ್ಯಾಚಾರ ಪ್ರಯತ್ನ ಕೃತ್ಯವು ಕೇವಲ ಸಿದ್ಧತೆಯನ್ನು ಮೀರಿ ನಡೆದಿದೆ ಎಂಬುದನ್ನು ಪ್ರಾಸಿಕ್ಯೂಷನ್ ನಿರೂಪಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

“ಈ ಆರೋಪಗಳು ಅತ್ಯಾಚಾರ ಪ್ರಯತ್ನದ ಅಪರಾಧವನ್ನು ನಿರೂಪಿಸುವುದಿಲ್ಲ. ಆರೋಪಿಗಳ ವಿರುದ್ಧ ಸಂತ್ರಸ್ತೆಯ ಮೇಲೆ ಸಂಭೋಗ ನಡೆಸುವಂಥ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ್ದರು ಎಂಬ ಯಾವ ಆರೋಪವೂ ಇಲ್ಲ” ಎಂದು ನ್ಯಾಯಾಲಯ ಹೇಳಿದೆ. ಅತ್ಯಾಚಾರ ಪ್ರಯತ್ನ ಅಥವಾ ಅತ್ಯಾಚಾರದಂಥ ಆರೋಪಗಳನ್ನು ನಿರ್ಣಯಿಸುವ ಪ್ರಮುಖ ಸಂಗತಿಯಾದ ವಿವಸ್ತ್ರವನ್ನು ಆರೋಪಿಗಳು ಸಂತ್ರಸ್ತೆಯ ಮೇಲೆ ಎಸಗಿರಲಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಲೈಂಗಿಕ ದೌರ್ಜನ್ಯ ಘಟನೆಯ ಕುರಿತು ವರದಿ ಮಾಡಿದ ದೂರುದಾರರನ್ನು ನಿಂದಿಸಿ, ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಆರೋಪಿ ಪವನ್ ನ ತಂದೆ ಅಶೋಕ್ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 ಹಾಗೂ 506ರ ಅಡಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News