ಕ್ಷೇತ್ರ ಮರು ವಿಂಗಡಣೆ ಕುರಿತು ಪ್ರತಿಭಟನೆ; ಉಭಯ ಸದನಗಳಲ್ಲಿ ಗದ್ದಲ, ಕಲಾಪ ಮುಂದೂಡಿಕೆ

PC : PTI
ಹೊಸದಿಲ್ಲಿ: ವಿರೋಧ ಪಕ್ಷದ ಸಂಸದರು ಸಂಸತ್ತಿನ ಹಾಗೂ ವಿಧಾನ ಸಭಾ ಕ್ಷೇತ್ರಗಳ ಮರು ವಿಂಗಡಣೆ ಪ್ರಕ್ರಿಯೆಯ ವಿರುದ್ಧದ ಘೋಷಣೆಯುಳ್ಳ ಟಿ ಶರ್ಟ್ ಧರಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಉಭಯ ಸದನಗಳ ಕಲಾಪವನ್ನು ಬುಧವಾರ ಒಂದು ದಿನ ಮುಂದೂಡಲಾಯಿತು.
ಡಿಎಂಕೆ ಸದಸ್ಯರು #fairdelimitation ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಜಯ ಗಳಿಸುತ್ತದೆ ಎಂಬ ಘೋಷಣೆಗಳನ್ನು ಬರೆದ ಬಿಳಿ ಟಿ ಶರ್ಟ್‌ಗಳನ್ನು ಧರಿಸಿದ್ದರು.
ಘೋಷಣೆಗಳನ್ನು ಬರೆದಿರುವ ಟಿ ಶರ್ಟ್‌ಗಳನ್ನು ಹಾಕಿಕೊಂಡು ಬಂದ ಸದಸ್ಯರಿಗೆ ಸದನದಿಂದ ಹೊರ ಹೋಗುವಂತೆ ಹಾಗೂ ಸದನದ ಘನತೆಯನ್ನು ಕಾಪಾಡಿಕೊಳ್ಳುವ ಸೂಕ್ತ ಉಡುಪನ್ನು ಧರಿಸಿ ಹಿಂದಿರುಗುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೂಚಿಸಿದರು.
‘‘ಕೆಲವು ಸದಸ್ಯರು ಸದನದ ಗೌರವ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುತ್ತಿಲ್ಲ’’ ಎಂದು ಬಿರ್ಲಾ ಹೇಳಿದರು. ಟಿ ಶರ್ಟ್ ಧರಿಸುವುದು ಸದನದ ಘನತೆಯ ಉಲ್ಲಂಘನೆ ಎಂದು ಅವರು ಒತ್ತಿ ಹೇಳಿದರು. ‘‘ನೀವು ಘೋಷಣೆಗಳನ್ನು ಬರೆದೆ ಟಿ ಶರ್ಟ್‌ಗಳನ್ನು ಹಾಕಿಕೊಂಡು ಬರುವುದಾದರೆ, ಸದನ ಕಾರ್ಯ ನಿರ್ವಹಿಸದು. ನೀವು ಟಿ ಶರ್ಟ್ ಕಳಚಿ ಬಂದರೆ ಸದನ ಕಾರ್ಯ ನಿರ್ವಹಿಸಲಿದೆ’’ ಎಂದು ಬಿರ್ಲಾ ಸಂಸದರಿಗೆ ತಿಳಿಸಿದರು.
ಈ ವಿಷಯದ ಕುರಿತಂತೆ ಮೊದಲು ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 12 ಗಂಟೆ ವರೆಗೆ ಮುಂದೂಡಿದರು. ಸದನ ಮಧ್ಯಾಹ್ನ 12 ಗಂಟೆಗೆ ಮತ್ತೆ ಸೇರಿದಾಗ ತೆಲುಗು ದೇಶಂ ಪಕ್ಷ (ಟಿಡಿಪಿ) ಸದಸ್ಯ ಕೃಷ್ಣ ಪ್ರಸಾದ್ ಟಿನೇಟಿ ಅವರು ಕಲಾಪವನ್ನು ಅಪರಾಹ್ನ 2 ಗಂಟೆ ವರೆಗೆ ಮುಂದೂಡಿದರು. ಈ ಸಂದರ್ಭ ಕ್ಷೇತ್ರ ಮರು ವಿಂಗಡಣೆ ವಿಷಯದ ಕುರಿತು ಧ್ವನಿ ಎತ್ತಲು ಡಿಎಂಕೆ ಸದಸ್ಯರು ಪ್ರಯತ್ನಿಸಿದರು. ಆದರೆ, ಜನಗಣತಿ ಇನ್ನೂ ನಡೆಯದ ಕಾರಣ ಈ ವಿಷಯ ಸರಕಾರದ ಗಮನದಲ್ಲಿಲ್ಲ ಎಂದು ಹೇಳಿ ಸ್ವೀಕರ್ ಮನವಿಯನ್ನು ತಿರಸ್ಕರಿಸಿದರು.
ರಾಜ್ಯಸಭೆ ಕೂಡ ಇದೇ ರೀತಿಯ ಪ್ರತಿಭಟನೆ ಸಾಕ್ಷಿಯಾಯಿತು. ಗುರುವಾರ ಅಪರಾಹ್ನ 2 ಗಂಟೆಗೆ ಮತ್ತೆ ಸೇರಿದ ಸಭೆಗೆ ಡಿಎಂಕೆ ಸದಸ್ಯರು ಘೋಷಣೆಗಳನ್ನು ಬರೆದ ಟಿ ಶರ್ಟ್‌ಗಳನ್ನು ಹಾಕಿಕೊಂಡು ಬಂದರು. ಈ ನಡುವೆ ರಾಜ್ಯ ಸಭೆಯ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು.
ಮಧ್ಯಾಹ್ನದ ಭೋಜನಕ್ಕಿಂತ ಮುನ್ನ ಈ ವಿಷಯದ ಕುರಿತಂತೆ ರಾಜ್ಯಸಭೆಯ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು. ಇಂದು ಬೆಳಗ್ಗೆ ಕಲಾಪ ಆರಂಭವಾದಾಗ ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ಕಲಾಪವನ್ನು 12 ಗಂಟೆಗೆ ಮುಂದೂಡಿದರು ಹಾಗೂ ಸದನದ ನಾಯಕರ ಸಭೆ ಕರೆದರು.
ಆದರೆ, ಈ ವಿಷಯದ ಕುರಿತ ಬಿಕ್ಕಟ್ಟು ಅಂತ್ಯವಾಗಲಿಲ್ಲ. ಮತ್ತೆ 12 ಗಂಟೆಗೆ ಸದನ ಸೇರಿದಾಗ, ರಾಜ್ಯ ಸಭೆಯ ಉಪ ಸಭಾಧ್ಯಕ್ಷ ಹರಿವಂಶ್ , ಕಲಾಪವನ್ನು ಮತ್ತೆ 15 ನಿಮಿಷ ಮುಂದೂಡಲಾಗಿದೆ ಎಂದು ಘೋಷಿಸಿದರು. ಅನಂತರ 12.15ಕ್ಕೆ ಅವರು ಕಲಾಪವನ್ನು ಅಪರಾಹ್ನ 2 ಗಂಟೆಗೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಕಲಾಪದ ಮುಂದೂಡಿಕೆಗೆ ಜಗದೀಪ್ ಧನ್ಕರ್ ಯಾವುದೇ ಕಾರಣವನ್ನು ನೀಡಿಲ್ಲ. ಆದರೆ, ಡಿಎಂಕೆ ಸದಸ್ಯರು ಘೋಷಣೆಗಳನ್ನು ಬರೆದ ಟಿ ಶರ್ಟ್ ಹಾಕಿಕೊಂಡು ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.