ಅಸ್ಸಾಂ | ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ 11ನೇ ತರಗತಿಯ ಎಲ್ಲಾ ಪರೀಕ್ಷೆಗಳು ರದ್ದು

ಸಾಂದರ್ಭಿಕ ಚಿತ್ರ
ಗುವಾಹಟಿ: ವಿವಿಧ ಸ್ಥಳಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕುರಿತು ವರದಿಯಾಗಿರುವ ಹಿನ್ನೆಲೆಯಲ್ಲಿ, ಮಾರ್ಚ್ 24ರಿಂದ ಮಾರ್ಚ್ 29ರವರೆಗೆ ನಡೆಯಬೇಕಿದ್ದ 11ನೇ ತರಗತಿಯ 36 ವಿಷಯಗಳನ್ನು ಒಳಗೊಂಡಿದ್ದ ಅಸ್ಸಾಂ ರಾಜ್ಯ ಶಾಲಾ ಶಿಕ್ಷಣ ಮಂಡಳಿಯ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಮಾರ್ಚ್ 21ರಂದು ನಡೆಯಬೇಕಿದ್ದ ಅಸ್ಸಾಂ ರಾಜ್ಯ ಶಾಲಾ ಶಿಕ್ಷಣ ಮಂಡಳಿಯ ಪ್ರೌಢ ಶಿಕ್ಷಣ ಹಂತದ ಪ್ರಥಮ ವರ್ಷದ ಗಣಿತ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರಿಂದ, ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು ಹಾಗೂ ಪೊಲೀಸರಿಗೆ ದೂರನ್ನು ನೀಡಲಾಗಿತ್ತು.
ಪ್ರೌಢ ಶಿಕ್ಷಣ ಹಂತದ ಪ್ರಥಮ ವರ್ಷ ಅಥವಾ 11ನೇ ತರಗತಿಯ ಪರೀಕ್ಷೆಗಳು ಮಾರ್ಚ್ 6ರಿಂದ ಪ್ರಾರಂಭಗೊಂಡಿದ್ದು, ಮಾರ್ಚ್ 29ರಂದು ಮುಕ್ತಾಯಗೊಳ್ಳಬೇಕಿತ್ತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪೆಗು, “ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಶಿಷ್ಟಾಚಾರ ಉಲ್ಲಂಘನೆಯ ವರದಿಗಳ ಹಿನ್ನೆಲೆಯಲ್ಲಿ, 2025ನೇ ಸಾಲಿನ ಪ್ರೌಢ ಶಿಕ್ಷಣ ಹಂತದ ಪ್ರಥಮ ವರ್ಷದ ಉಳಿದ ವಿಷಯಗಳ (ಮಾರ್ಚ್ 24ರಿಂದ ಮಾರ್ಚ್ 29ರವರೆಗೆ ನಿಗದಿಯಾಗಿರುವ) ಪರೀಕ್ಷೆಗಳು ರದ್ದುಗೊಂಡಿವೆ” ಎಂದು ಪ್ರಕಟಿಸಿದ್ದಾರೆ.
ಅಸ್ಸಾಂ ರಾಜ್ಯ ಶಾಲಾ ಶಿಕ್ಷಣ ಮಂಡಳಿಯ ಅಧಿಕೃತ ಆದೇಶವನ್ನು ಹಂಚಿಕೊಂಡಿರುವ ಅವರು, ಸೋಮವಾರ ನಡೆಯಲಿರುವ ಮಂಡಳಿ ಸಭೆಯಲ್ಲಿ ಪರೀಕ್ಷೆಯ ಹೊಸ ವೇಳಾಪಟ್ಟಿ ಕುರಿತು ತೆಗೆದುಕೊಳ್ಳಬೇಕಿರುವ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್ ಮಾಡಿರುವ ಸಚಿವ ಪೆಗು, “ಮೂರು ಸರಕಾರಿ ಶಾಲೆಗಳು ಸೇರಿದಂತೆ 18 ಶಾಲೆಗಳು ಗಣಿತ ಶಾಸ್ತ್ರ ವಿಷಯದ ಪರೀಕ್ಷೆ ನಿಗದಿಯಾಗಿದ್ದ ಒಂದು ದಿನ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆಯ ಭದ್ರತಾ ಮೊಹರನ್ನು ಒಡೆದಿದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ” ಎಂದೂ ಹೇಳಿದ್ದಾರೆ.
ನಿಗದಿತ ವೇಳಾಪಟ್ಟಿಗಿಂತ ಮುಂಚಿತವಾಗಿಯೇ ಗಣಿತ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯ ಭದ್ರತಾ ಮೊಹರನ್ನು ಒಡೆದು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದ 10 ಜಿಲ್ಲೆಗಳಲ್ಲಿನ 15 ಖಾಸಗಿ ಶಾಲೆಗಳ ಮಾನ್ಯತೆಯನ್ನು ಅಸ್ಸಾಂ ರಾಜ್ಯ ಶಾಲಾ ಶಿಕ್ಷಣ ಮಂಡಳಿ ಅಮಾನತುಗೊಳಿಸಿದೆ. ಇದೇ ರೀತಿ ನಿಯಮಗಳನ್ನು ಉಲ್ಲಂಘಿಸಿರುವ ಇನ್ನಿತರ ಮೂರು ಸರಕಾರಿ ಶಾಲೆಗಳ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ” ಎಂದೂ ಅವರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಲಾಗುತ್ತಿದ್ದು, 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 11ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದರಿಂದ ಈ ಶಾಲೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಸ್ಸಾಂ ರಾಜ್ಯ ಶಾಲಾ ಶಿಕ್ಷಣ ಮಂಡಳಿಯ ಆದೇಶದ ಪ್ರಕಾರ, ಗಣಿತ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯು ರದ್ದುಗೊಂಡ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ಶಾಲೆಗಳ ಪ್ರಾಂಶುಪಾಲರು ಹಾಗೂ ಶಾಲಾ ನಿರೀಕ್ಷಕರು ಮೊಹರು ಮಾಡಿದ ಗಣಿತ ಶಾಸ್ತ್ರ ಪ್ರಶ್ನೆ ಪತ್ರಿಕೆಗಳನ್ನು ವಾಪಸು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ.