ಕುರುಕ್ಷೇತ್ರ | ಧಾರ್ಮಿಕ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ : ಬಾಲಕನಿಗೆ ಗಾಯ

Photo credit: PTI
ಚಂಡೀಗಢ: ಹರ್ಯಾಣದ ಕುರುಕ್ಷೇತ್ರದಲ್ಲಿ ‘ಮಹಾಯಜ್ಞ’ ಕಾರ್ಯಕ್ರಮದಲ್ಲಿ ನೀಡಿದ ಆಹಾರದ ಗುಣಮಟ್ಟದ ಬಗ್ಗೆ ನಡೆದ ವಾಗ್ವಾದ ತಾರಕಕ್ಕೇರಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಅಪ್ರಾಪ್ತ ಬಾಲಕನಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಲಕ್ನೋ ನಿವಾಸಿ ಆಶಿಶ್ ಕುಮಾರ್(16) ಗಾಯಗೊಂಡ ಬಾಲಕ. ಈತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ಆಕ್ರೋಶಗೊಂಡ ಯಜ್ಞದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಬಂದಿದ್ದ ಅಪಾರ ಸಂಖ್ಯೆಯ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜನರು ಕುರುಕ್ಷೇತ್ರ-ಪೆಹೋವಾ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಕುರುಕ್ಷೇತ್ರದ ಕೇಶವ್ ಪಾರ್ಕ್‌ನಲ್ಲಿ ತ್ರಿಪುರಾ ಶಕ್ತಿಪೀಠದ ಮಣಿಕುಟ್‌ನ ಶ್ರೀ ಶ್ರೀ ಸ್ವಾಮಿ ಹರಿ ಓಂ ಅವರು ಮಹಾಯಜ್ಞವನ್ನು ಆಯೋಜಿಸಿದರು. ಈ ಕಾರ್ಯಕ್ರಮಕ್ಕೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರು ಆಗಮಿಸಿದರು.
ಪೊಲೀಸರ ಪ್ರಕಾರ, ಕೆಲವು ಬ್ರಾಹ್ಮಣರು ತಮಗೆ ಬಡಿಸುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿದರು. ಇದೇ ವಿಚಾರಕ್ಕೆ ಬ್ರಾಹ್ಮಣರು ಮತ್ತು ಸ್ವಾಮಿ ಹರಿ ಓಂ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಹರಿ ಓಂ ಅವರ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಗುಂಡು ಹಾರಿಸಿದರು ಎಂದು ಬ್ರಾಹ್ಮಣರು ಆರೋಪಿಸಿದರು. ಆ ಬಳಿಕ ಆಕ್ರೋಶಗೊಂಡ ಬ್ರಾಹ್ಮಣರು ಕಾರ್ಯಕ್ರಮದ ಪೋಸ್ಟರ್‌ಗಳನ್ನು ಹರಿದು ಹಾಕಿ ಕಲ್ಲು ತೂರಾಟ ನಡೆಸಿದರು.
ಎಸ್ಪಿ ವರುಣ್ ಸಿಂಗ್ಲಾಈ ಕುರಿತು ಪ್ರತಿಕ್ರಿಯಿಸಿ, ಗುಂಡೇಟಿನಿಂದ ಗಾಯಗೊಂಡ ಬಾಲಕನಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಅಪಾಯದಿಂದ ಪಾರಾಗಿದ್ದಾನೆ. ಇದಲ್ಲದೆ ಕಲ್ಲು ತೂರಾಟದಲ್ಲಿ ಉತ್ತರಪ್ರದೇಶದ ನಿವಾಸಿಯೋರ್ವರು ಗಾಯಗೊಂಡರು. ಈ ಬಗ್ಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಕುರುಕ್ಷೇತ್ರ- ಪೆಹೋವಾ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುತ್ತಿರುವವರ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸ್ವಾಮಿ ಹರಿ ಓಂ, ಕಳೆದ ನಾಲ್ಕು ದಿನಗಳಿಂದ ಇಲ್ಲಿ ನಡೆಯುತ್ತಿರುವ ʼ1008 ಕುಂಡ ಯಜ್ಞʼಕ್ಕೆ ಅಡ್ಡಿಪಡಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.