ಯುಎಇಯಲ್ಲಿ 25 ಭಾರತೀಯರಿಗೆ ಮರಣದಂಡನೆ, ತೀರ್ಪು ಇನ್ನಷ್ಟೇ ಜಾರಿಗೊಳ್ಳಬೇಕಿದೆ: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದಲ್ಲಿ 25 ಭಾರತೀಯ ಪ್ರಜೆಗಳು ಮರಣದಂಡನೆಗೆ ಗುರಿಯಾಗಿದ್ದಾರೆ. ಆದರೆ ಶಿಕ್ಷೆಯನ್ನು ಇನ್ನೂ ಜಾರಿಗೊಳಿಸಲಾಗಿಲ್ಲ ಎಂದು ಕೇಂದ್ರ ಸರಕಾರವು ಗುರುವಾರ ಸಂಸತ್ತಿನಲ್ಲಿ ತಿಳಿಸಿದೆ.
ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿವರ್ಧನ ಸಿಂಗ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ.
ವಿದೇಶಗಳ ಜೈಲುಗಳಲ್ಲಿ ಹಲವು ವರ್ಷಗಳಿಂದ ಕೊಳೆಯುತ್ತಿರುವ ಭಾರತೀಯರ ಸಂಖ್ಯೆಯೆಷ್ಟು,ಎಷ್ಟು ಭಾರತೀಯರು ಮರಣ ದಂಡನೆಗೆ ಗುರಿಯಾಗಿದ್ದಾರೆ ಮತ್ತು ಅವರನ್ನು ಉಳಿಸಲು ಭಾರತ ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪ್ರಶ್ನಿಸಲಾಗಿತ್ತು.
ಸಚಿವಾಲಯದ ಬಳಿ ಲಭ್ಯವಿರುವ ಮಾಹಿತಿಯಂತೆ ಪ್ರಸ್ತುತ ವಿದೇಶಗಳ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳು ಸೇರಿದಂತೆ 10,152 ಭಾರತೀಯರು ಬಂಧನದಲ್ಲಿದ್ದಾರೆ ಎಂದು ಸಿಂಗ್ ತಿಳಿಸಿದರು.
ಜೈಲುಗಳಲ್ಲಿರುವವರು ಸೇರಿದಂತೆ ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ,ಭದ್ರತೆ ಮತ್ತು ಯೋಗಕ್ಷೇಮಕ್ಕೆ ಸರಕಾರವು ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದರು.
ಒಟ್ಟು ಎಂಟು ದೇಶಗಳಲ್ಲಿ ಭಾರತೀಯರಿಗೆ ಮರಣ ದಂಡನೆಯನ್ನು ವಿಧಿಸಲಾಗಿದೆ. ಆದರೆ ಅದಿನ್ನೂ ಜಾರಿಗೊಂಡಿಲ್ಲ. ಯುಎಇಯಲ್ಲಿ 25,ಸೌದಿ ಅರೇಬಿಯದಲ್ಲಿ 11, ಮಲೇಶಿಯಾದಲ್ಲಿ 6, ಕುವೈತ್‌ನಲ್ಲಿ ಮೂವರು ಹಾಗೂ ಇಂಡೋನೇಷ್ಯಾ, ಖತರ್, ಯೆಮನ್ ಮತ್ತು ಅಮೆರಿಕದಲ್ಲಿ ತಲಾ ಓರ್ವರು ಮರಣ ದಂಡನೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು/ದೂತಾವಾಸಗಳು ವಿದೇಶಿ ನ್ಯಾಯಾಲಯಗಳಿಂದ ಮರಣ ದಂಡನೆಗಳು ಸೇರಿದಂತೆ ವಿದೇಶಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆಗಳಿಗೆ ಸಾಧ್ಯವಿರುವ ಎಲ್ಲ ನೆರವುಗಳನ್ನು ಒದಗಿಸುತ್ತಿವೆ. ಭಾರತೀಯ ಅಧಿಕಾರಿಗಳು ಜೈಲುಗಳಿಗೆ ಭೇಟಿ ನೀಡುವ ಮೂಲಕ ಅವರಿಗೆ ರಾಜತಾಂತ್ರಿಕ ಸಂಪರ್ಕ ಸೌಲಭ್ಯವನ್ನು ಒದಗಿಸುತ್ತಿದ್ದಾರೆ ಹಾಗೂ ನ್ಯಾಯಾಲಯಗಳು, ಜೈಲುಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಮತ್ತು ಇತರ ಸಂಬಂಧಿದ ಸಂಸ್ಥೆಗಳೊಂದಿಗೆ ಅವರ ಪ್ರಕರಣಗಳನ್ನು ಅನುಸರಿಸುತ್ತಿದ್ದಾರೆ. ಮೇಲ್ಮನವಿ ಸಲ್ಲಿಕೆ, ಕ್ಷಮೆಯಾಚನೆ ಅರ್ಜಿ ಸಲ್ಲಿಕೆ ಇತ್ಯಾದಿ ಸೇರಿದಂತೆ ವಿವಿಧ ಕಾನೂನು ಪರಿಹಾರಗಳನ್ನು ಕಂಡುಕೊಳ್ಳಲು ಜೈಲುಗಳಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ಒದಗಿಸಲಾಗುತ್ತಿದೆ ಎಂದು ಸಿಂಗ್ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ವಿದೇಶಗಳಲ್ಲಿ ಯಾವುದೇ ಭಾರತೀಯರಿಗೆ ಮರಣ ದಂಡನೆಯನ್ನು ಜಾರಿಗೊಳಿಸಲಾಗಿದೆಯೇ ಎಂದೂ ಸಚಿವಾಲಯವನ್ನು ಪ್ರಶ್ನಿಸಲಾಗಿತ್ತು.
ಮಲೇಶಿಯಾ, ಕುವೈತ್, ಖತರ್ ಮತ್ತು ಸೌದಿ ಅರೇಬಿಯಗಳಲ್ಲಿ ಇಂತಹ ಮರಣ ದಂಡನೆಗಳನ್ನು ಜಾರಿಗೊಳಿಸಲಾಗಿದೆ. 2024ರಲ್ಲಿ ಕುವೈತ್ ಮತ್ತು ಸೌದಿ ಅರೇಬಿಯಗಳಲ್ಲಿ ತಲಾ ಮೂವರು ಮತ್ತು ಝಿಂಬಾಬ್ವೆಯಲ್ಲಿ ಓರ್ವ ಭಾರತೀಯ ಪ್ರಜೆಗೆ ಮರಣ ದಂಡನೆಯನ್ನು ಜಾರಿಗೊಳಿಸಲಾಗಿದೆ. 2023ರಲ್ಲಿ ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ತಲಾ ಐವರು ಮತ್ತು ಮಲೇಶಿಯಾದಲ್ಲಿ ಓರ್ವ ಭಾರತೀಯ ಪ್ರಜೆಯನ್ನು ಗಲ್ಲಿಗೇರಿಸಲಾಗಿದೆ ಎಂದು ತಿಳಿಸಿದ ಸಿಂಗ್, ಯುಎಇ ಅಧಿಕಾರಿಗಳು ಇಂತಹ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ರಾಯಭಾರಿ ಕಚೇರಿಯಲ್ಲಿ ಲಭ್ಯವಿರುವ ಅನೌಪಚಾರಿಕ ಮಾಹಿತಿಯಂತೆ 2020 ಮತ್ತು 2024ರ ನಡುವೆ ಅಲ್ಲಿ ಯಾವುದೇ ಭಾರತೀಯ ಪ್ರಜೆಗೆ ಮರಣ ದಂಡನೆಯನ್ನು ಜಾರಿಗೊಳಿಸಲಾಗಿಲ್ಲ ಎಂದು ಹೇಳಿದರು.