ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ದಿಢೀರ್ ಮಳೆ

ಬೆಂಗಳೂರು: ಬೇಸಿಗೆ ಬಿಸಿಲು, ಸೆಖೆಯಿಂದ ಕಂಗೆಟ್ಟಿದ್ದ ಉದ್ಯಾನನಗರಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ದಿಢೀರ್ ಮಳೆಯ ಸಿಂಚನವಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ.
ರಾಜಧಾನಿ ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರ, ಸಂಜಯನಗರ, ಭೂಪಸಂದ್ರ, ಹೆಬ್ಬಾಳ ಮತ್ತು ಮೇಖ್ರಿ ವೃತ್ತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಬಿದ್ದಿದೆ. ಅಲ್ಲದೆ, ಇನ್ನೂ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕ ಪ್ರಯಾಣಿಕರು ಮಳೆಯಲ್ಲಿ ಸಿಲುಕಿ, ಪರದಾಡುವಂತೆ ಆಯಿತು.
ಈ ಮಧ್ಯೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ ಆಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಸುಮಾರು ಅರ್ಧಗಂಟೆ ಕಾಲ ಸುರಿದ ಮಳೆಯ ಹಿನ್ನೆಲೆಯಲ್ಲಿ ವಾತಾವರಣ ಕೂಲ್ ಕೂಲ್ ಆಗಿದ್ದು, ವರ್ಷದ ಮೊದಲ ಮಳೆಯಿಂದ ಜನರು ಸಂತೋಷಗೊಂಡಿದ್ದಾರೆ.
ಅದೇ ರೀತಿಯಲ್ಲಿ ಕೋಲಾರ, ಹಾಸನ ಸೇರಿದಂತೆ ಇನ್ನಿತರ ಕಡೆಗಳಲ್ಲಿಯೂ ಮಳೆ ಬಿದ್ದಿದೆ ಎಂದು ಗೊತ್ತಾಗಿದೆ. ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಮಗಳೂರು, ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ಒಂದೆರಡು ಕಡೆಗಳಲ್ಲಿ ಕಡೆಗಳಲ್ಲಿ ನಾಳೆ (ಮಾ.23)ಯೂ ಹಗುರ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.