ರಾಜ್ಯದ 5 ಮಹಾನಗರ ಪಾಲಿಕೆಗಳಿಗೆ ಈ ವರ್ಷವೇ ಚುನಾವಣೆ : ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ

ಸಾಂದರ್ಭಿಕ ಚಿತ್ರ | PTI
ಮೈಸೂರು : ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ತುಮಕೂರು ಸೇರಿದಂತೆ ಐದು ಮಹಾನಗರ ಪಾಲಿಕೆಗೆ ಈ ವರ್ಷವೇ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಗೆ ಸೋಮವಾರ ಭೇಟಿ ನೀಡಿ ಚುನಾವಣಾ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಹೈಕೋರ್ಟ್ ಆದೇಶದಂತೆ ಮೇ.31ರೊಳಗೆ ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಿಸಬೇಕು. ಒಂದು ವೇಳೆ ಪ್ರಕಟಿಸದಿದ್ದರೆ ಹಿಂದಿನ ಮೀಸಲಾತಿ ಆಧಾರದ ಮೇಲೆ ಹೈಕೋರ್ಟ್‌ಗೆ ಮಾಹಿತಿ ನೀಡಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಸಹ ಬೇರೆ ರಾಜ್ಯದ ಪ್ರಕರಣದ ಸಂಬಂಧ 2006 ರಲ್ಲಿ ಬೇರೆ ಮಹತ್ವದ ತೀರ್ಪು ನೀಡಿದೆ. ಅದರ ಆಧಾರದ ಮೇಲೆ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ಇದರ ಜೊತೆಗೆ ಜಿ.ಪಂ., ತಾ.ಪಂ. ಮತ್ತು ಕೆಲವು ಪುರಸಭೆ, ನಗರಪಾಲಿಕೆಗಳಿಗೂ ಈ ವರ್ಷದಲ್ಲೇ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.
ಈಗಾಗಲೇ ರಾಜ್ಯ ಸರಕಾರಕ್ಕೆ ಮೀಸಲಾತಿ ಪಟ್ಟಿ ನೀಡುವಂತೆ ಹಲವು ಬಾರಿ ಪತ್ರ ಬರೆದಿದ್ದೇವೆ. ಬಜೆಟ್ ಇದ್ದಿದರಿಂದ ಇದರ ಪ್ರಕ್ರಿಯೆ ಸ್ವಲ್ಪ ವಿಳಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಮೇ.31ರೊಳಗೆ ಮೀಸಲಾತಿಯನ್ನು ರಾಜ್ಯ ಸರಕಾರ ಪ್ರಕಟಿಸಬೇಕು ಎಂದು ಹೇಳಿದರು.