ಜಮೀನು ಸಂಬಂಧ ಜಿಲ್ಲಾಧಿಕಾರಿಗೆ ಪ್ರಮೋದಾ ದೇವಿ ಪತ್ರ ವಿಚಾರ | ಪ್ರತಿಕ್ರಿಯಿಸಲು ನಿರಾಕರಿಸುತ್ತಿರುವ ಸಿದ್ದಯ್ಯನಪುರ ಗ್ರಾಮಸ್ಥರು

ಮೈಸೂರು, ಎ.16: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ರಾಜಮನೆತನಕ್ಕೆ ಸೇರಿದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆತಂಕಕ್ಕೊಳಗಾಗಿದ್ದ ಸಿದ್ದಯ್ಯನಪುರ ಗ್ರಾಮಸ್ಥರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆ ಬಳಿಕ ಮೌನಕ್ಕೆ ಶರಣಾಗಿದ್ದು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದಾ ದೇವಿ, ‘ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ’ ಎಂಬ ಹೇಳಿಕೆ ಬೆನ್ನಲ್ಲೇ ಗ್ರಾಮದ ಮುಖಂಡರು ಈ ಬಗ್ಗೆ ಯಾವುದೇ ಮರು ಹೇಳಿಕೆ ನೀಡದಂತೆ ಗ್ರಾಮಸ್ಥರಿಗೆ ‘ಕಟ್ಟಪ್ಪಣೆ’ ಹೊರಡಿಸಿದ್ದಾರೆಂದು ತಿಳಿದು ಬಂದಿದೆ.
ರಾಜ ಮನೆತನದ ಜಮೀನು ವಿವಾದ ಸಂಬಂಧವೋ, ರಾಜವಂಶಸ್ಥೆ ಪ್ರಮೋದಾ ದೇವಿಯ ಹೇಳಿಕೆ ವಿಚಾರವಾಗಿಯೋ ಪ್ರತಿಕ್ರಿಯೆ ನೀಡದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವವರಿಗೆ 2 ಸಾವಿರ ರೂ. ದಂಡ ವಿಧಿಸುವುದಾಗಿಯೂ ‘ಊರ ಮುಖಂಡರು’ ತೀರ್ಮಾನ ಕೈಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಸಿದ್ದಯ್ಯನಪುರ ಗ್ರಾಮದಲ್ಲಿ ದಲಿತರು ಮಾತ್ರ ವಾಸ ಮಾಡು ತ್ತಿದ್ದು, ಇತರ ಜನಾಂಗದ ಯಾರೂ ಇಲ್ಲಿ ವಾಸ ಮಾಡುತ್ತಿಲ್ಲ. ಸಾವಿರಕ್ಕೂ ಹೆಚ್ಚು ದಲಿತ ಕುಟುಂಬಗಳು ಇಲ್ಲಿ ಬದುಕು ಕಟ್ಟಿಕೊಂಡಿವೆ.
ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಇತ್ತೀಚೆಗೆ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಚಾಮರಾಜನಗರ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜಮೀನುಗಳು ರಾಜಮನೆತನಕ್ಕೆ ಸೇರಿದ್ದಾಗಿದ್ದು, ಯಾವುದೇ ಕಾರಣಕ್ಕೂ ಕಂದಾಯ ಗ್ರಾಮ ಮಾಡದಂತೆ ಒತ್ತಾಯ ಮಾಡಿದ್ದರು.
ಈ ಹಿನ್ನಲೆಯಲ್ಲಿ ಸಿದ್ದಯ್ಯನಪುರ, ಬಸಾಪುರ, ಅಟ್ಟುಗುಳಿಪುರ, ಹರದನಹಳ್ಳಿ ಭಾಗದಲ್ಲಿ ಅರಮನೆಯವರ ಆಸ್ತಿ ಇದ್ದು, ಸಿದ್ದಯ್ಯನಪುರ ಗ್ರಾಮಸ್ಥರು ಅರಮನೆಗೆ ಸೇರಿದ ಜಾಗದಲ್ಲೇ ಊರು ನಿರ್ಮಾಣಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದರಿಂದ ಆತಂಕಕ್ಕೀಡಾಗಿದ್ದ ಸಿದ್ದಯ್ಯನಪುರ ಗ್ರಾಮಸ್ಥರು, ನಮ್ಮ ತಾತ, ಮುತ್ತಾತನ ಕಾಲದಲ್ಲಿಯೇ ಅಂದಿನ ಮೈಸೂರು ಮಹರಾಜರು ದಾನವಾಗಿ ನೀಡಿದ್ದಾರೆ. ಹಾಗಾಗಿ ನಾವು ಊರು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಈಗ ನಮ್ಮನ್ನು ಒಕ್ಕಲೆಬ್ಬಿಸಿದರೆ ಎಲ್ಲಿಗೆ ಹೋಗುವುದು, ಅಂತಹ ಸಂದರ್ಭ ಬಂದರೆ ಮೈಸೂರು ಅರಮನೆ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸರಕಾರ ಮತ್ತು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ಇದರ ಬೆನ್ನಲ್ಲೇ ಎ.14 ರಂದು ಪ್ರಮೋದಾದೇವಿ ಒಡೆಯರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮಗೆ ಸೇರಿದ ಜಮೀನನ್ನು ಮಾತ್ರ ನೋಂದಣಿ ಮಾಡಿಕೊಡುವಂತೆ ಪತ್ರ ಬರೆದಿದ್ದೇನೆ. ಅಲ್ಲಿನ ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ನಿಮ್ಮನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಸ್ವಲ್ಪನಿರಾಳರಾದ ಸಿದ್ದಯ್ಯನಪುರ ಗ್ರಾಮಸ್ಥರು, ಪ್ರಮೋದಾದೇವಿ ಹೇಳಿಕೆಯಿಂದ ಯಾರೊಂದಿಗೂ ಈ ವಿಚಾರ ಮಾತನಾಡುವುದು ಬೇಡ. ಪತ್ರಿಕೆ, ಟಿ.ವಿ. ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆ ನೀಡುವುದು ಬೇಡವೆಂದು ಸ್ವಯಂ ನಿರ್ಬಂಧ ಹಾಕಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಹಾಗಾಗಿ ಬುಧವಾರ ಗ್ರಾಮಸ್ಥರನ್ನು ಮಾತನಾಡಿಸಿ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ವಾರ್ತಾಭಾರತಿ ಪ್ರಯತ್ನಕ್ಕೆ ಅಲ್ಲಿ ಗ್ರಾಮಸ್ಥರು ಸ್ಪಂದಿಸಲಿಲ್ಲ. ‘ಇದೊಂದು ವಿಚಾರದಲ್ಲಿ ನಮ್ಮನ್ನು ಏನೂ ಕೇಳಬೇಡಿ, ಮಹಾರಾಣಿಯವರು ಹೇಳಿಕೆ ಕೊಟ್ಟ ಮೇಲೆ ನಾವು ಏನು ಮಾತನಾಡುವುದಿಲ್ಲ. ಮಾಧ್ಯಮದವರಿಂದಲೇ ನಾವು ಆತಂಕಕ್ಕೊಳಗಾಗುವ ಪರಿಸ್ಥಿತಿ ಬಂದಿದೆ. ದಯಮಾಡಿ ಈ ವಿಚಾರ ಕೇಳಬೇಡಿ’ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಮೈಸೂರು ರಾಜಮನೆತನಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿದ್ದು, ಅದನ್ನು ನೋಂದಣಿ ಮಾಡಿಕೊಡುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿದ್ದರು. ಈ ಸಂಬಂಧ ಚಾಮರಾಜನಗರದಿಂದ 15 ಕೀ.ಮೀ.ದೂರದಲ್ಲಿರುವ ಸಿದ್ದಯ್ಯನಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳನ್ನು ಮಾತನಾಡಿಸಲು ಮುಂದಾದಾಗ ಯಾವೊಬ್ಬ ಗ್ರಾಮಸ್ಥರು ಈ ಬಗ್ಗೆ ಮಾತನಾಡಲು ಮುಂದೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿದಾಗ ‘ಮಾತನಾಡಿದರೆ ಗ್ರಾಮದ ಮುಖಂಡರು 2 ಸಾವಿರ ರೂ. ದಂಡ ವಿಧಿಸಲಿದ್ದಾರೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ.