ಸಿಎಂ ಸಿದ್ದರಾಮಯ್ಯ ಬೆಲೆ ಏರಿಕೆ ತಜ್ಞರ ಸಮಿತಿ ರಚಿಸಿದಂತಿದೆ : ವಿಜಯೇಂದ್ರ ಟೀಕೆ
ಮೈಸೂರು: ಸಿದ್ದರಾಮಯ್ಯನವರ ಸರಕಾರವು 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದೆ. ಸಿದ್ದರಾಮಯ್ಯನವರು ಬೆಲೆ ಏರಿಕೆಗೇ ತಜ್ಞರ ಸಮಿತಿ ರಚಿಸಿದಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಜನಸಾಮಾನ್ಯರಿಗೆ ಬರೆ ಎಳೆಯುವ ಕೆಲಸವನ್ನು ಬೇರೆ ರಾಜ್ಯಗಳಲ್ಲಿ ಯಾರೂ ಮಾಡಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ಸಿನವರು, ಸಿದ್ದರಾಮಯ್ಯನವರು ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸರಕಾರಕ್ಕೆ ದಿಕ್ಕು ದೆಸೆ ಇಲ್ಲ. ಪೆಟ್ರೋಲ್, ನೀರಿನ ದರ, ಡೀಸೆಲ್ ದರ ಹೆಚ್ಚಿಸಿದ್ದಾರೆ. ಕಸದ ಮೇಲೂ ಸುಂಕ ವಿಧಿಸುತ್ತಿದ್ದಾರೆ. ಹಾಲಿನ ದರ 9 ರೂ. ಜಾಸ್ತಿ ಆಗಿದೆ. ಪೆಟ್ರೋಲ್- ಡೀಸೆಲ್‍ನಲ್ಲಿ 7.50 ರೂ. ತೆರಿಗೆ ಹೆಚ್ಚಿಸಿದ್ದಾರೆ ಎಂದು ನುಡಿದರು.
48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ ಸಿದ್ದರಾಮಯ್ಯನವರು ಜನರಿಗೆ ಕಪಾಳಮೋಕ್ಷ ಮಾಡುತ್ತಿದ್ದಾರಾ? ಮೋದಿಯವರು ಮಾಡುತ್ತಿದ್ದಾರಾ ನೀವೇ ಹೇಳಿ ಎಂದು ಪ್ರಶ್ನಿಸಿದರು. ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಸುಂಕ ಹೆಚ್ಚಿಸಿದ್ದರೂ ಅದನ್ನು ಜನರ ಮೇಲೆ ಹೇರುವುದಿಲ್ಲ. ಕಂಪೆನಿಗಳೇ ಅದನ್ನು ಭರಿಸಲಿವೆ ಎಂದು ಕೇಂದ್ರ ಸಚಿವರು ಹೇಳಿದ್ದಾಗಿ ಗಮನ ಸೆಳೆದರು.
ಗ್ಯಾಸ್ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಗುಡಿಸಲಿನಲ್ಲಿ ವಾಸಿಸುವ ಬಡವರು ಕೂಡ ಎಲ್‍ಪಿಜಿ ಗ್ಯಾಸ್ ಬಳಸಬೇಕೆಂದು ಉಜ್ವಲ ಯೋಜನೆಯನ್ನು ತಂದವರು ಪ್ರಧಾನಿ ನರೇಂದ್ರ ಮೋದಿ ಜೀ ಅವರು. ಮಾರ್ಚ್ 2023ರಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1107 ರೂ. ಇತ್ತು. ಈಗ ಅದು 50 ರೂ. ಹೆಚ್ಚಳದ ಬಳಿಕವೂ 850 ಆಗಿದೆ. ಆಗಸ್ಟ್ 2023ರಲ್ಲಿ 907 ರೂ.ಗೆ ತಂದಿದ್ದರು. ಕೇಂದ್ರ ಸರಕಾರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಸಿದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಹೆಚ್ಚಿಸಿದ್ದಾರೆ. ಅದರ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಿಲ್ಲ. ರಾಹುಲ್ ಗಾಂಧಿಯವರಂಥ ಪುಣ್ಯಾತ್ಮ ಪ್ರಧಾನಿ ಆಗಿದ್ದರೆ ಸಿಲಿಂಡರ್ ಬೆಲೆ 2,500 ರೂ. ಆಗುತ್ತಿತ್ತು ಎಂದು ತಿಳಿಸಿದರು.