ಸರಕಾರವೇ ಮುಂದೆ ನಿಂತು ಉದ್ಯೋಗ ಕೊಡಿಸಲಿ: ಶಿವಸುಂದರ್

ಮೈಸೂರು : ದೇಶದಲ್ಲಿ ಸಮಾನ ಗುಣಮಟ್ಟದ ಶಿಕ್ಷಣ ಮತ್ತು ಸರಕಾರವೇ ಮುಂದೆ ನಿಂತು ಉದ್ಯೋಗ ಕೊಡುವುದು ಅಥವಾ ಉದ್ಯೋಗದ ಸಾಮಾಜಿಕ ನೀತಿಯನ್ನು ಜಾರಿ ಮಾಡದಿದ್ದರೆ ಉದ್ಯೋಗ ಎಂಬುದು ಗಗನ ಕುಸುಮವಾಗಲಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಅಂಗಳ ಸಾಹಿತ್ಯ ಬಳಗ, ದೇವರತ್ನ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ-ಯುವಜನರ ಸಮಸ್ಯೆ-ಸವಾಲು-ಪರಿಹಾರ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಉದ್ಯೋಗಗಳನ್ನು ನೀಡಬೇಕಾದ ಸರಕಾರಗಳೂ ತಮ್ಮ ಜವಾಬ್ದಾರಿ ಮರೆತು ಕಾರ್ಪೊರೇಟ್ ವಲಯ ಮತ್ತು ಬಂಡವಾಳಶಾಹಿಗಳ ಪರ ನಿಂತಿವೆ. ಸರಕಾರಿ ಶಾಲೆಗಳಲ್ಲಿ ಓದಿದ ಪ್ರತಿಭಾವಂತರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸರಕಾರವೇ ಮುಂದೆ ನಿಂತು ಉದ್ಯೋಗ ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
1991ರಿಂದ ಬಂದ ಪಕ್ಷಗಳು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿವೆ. 1991 ನಂತರ ಬಂದ ಆರ್ಥಿಕ ನೀತಿ, ಬಡವರನ್ನು ಬಡವರನ್ನಾಗಿಸಿ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿ ಕಾರ್ಪೊರೇಟ್ ವಲಯಕ್ಕೆ ಪೂರಕವಾದ ಆರ್ಥಿಕ ನೀತಿ ಶಿಕ್ಷಣ ನೀತಿಗಳನ್ನು ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿಯಲ್ಲಿ ಉದ್ಯೋಗವಿರೂ ಸರಕಾರಗಳು ಇತ್ತ ಗಮನ ಹರಿಸುತ್ತಿಲ್ಲ, ಗ್ರಾಮ ಮಟ್ಟದಲ್ಲಿ ಸ್ವ-ಉದ್ಯೋಗಕ್ಕೆ ಹೆಚ್ಚಿನ ಒತ್ತು ಕೊಟ್ಟು ಎಂಎಸ್‌ಎಂಇ ಗಳನ್ನು ಬೆಳೆಸಬೇಕು. ಆಗ ಉದ್ಯೋಗ ಸೃಷ್ಟಿಯಾಗಲಿದೆ. ಗ್ರಾಮ ಮಟ್ಟದ ಉದ್ಯೋಗಗಳು ಕಡಿಮೆಯಾಗುತ್ತಿದೆ. ಇದರಿಂದ ದೇಶದ ಜಿಡಿಪಿಯೂ ಕುಸಿಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇವರತ್ನ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ಎಂ.ಶಿವಪ್ರಸಾದ್, ಪ್ರಗತಿಪರ ಚಿಂತಕಿ ಸವಿತಾ ಪ.ಮಲ್ಲೇಶ್, ಸಂಶೋಧನಾ ವಿದ್ಯಾರ್ಥಿ ವರಹಳ್ಳಿ ಆನಂದ್, ಪ್ರದೀಪ್ ಮುಮ್ಮಡಿ ಉಪಸ್ಥಿತರಿದ್ದರು.
ಬೆಟ್ಟದಂತಹ ನಮ್ಮ ಸಮಸ್ಯೆಗಳು ಪರ್ವತದಂತೆ ಬೆಳೆಯುತ್ತಿವೆ. ಇವುಗಳನ್ನು ಪ್ರಶ್ನಿಸಬೇಕಾದ ವಿದ್ಯಾರ್ಥಿ ಯುವಜನರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಗೂಗಲ್‌ನಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಂದು ಮೈ ಮರೆಯುತ್ತಿದ್ದಾರೆ. ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸಮಸ್ಯೆ ಇತ್ಯರ್ಥಕ್ಕೆ ಕೂತು ಚರ್ಚೆ ಮಾಡಬೇಕು. ಜನಪ್ರತಿನಿಧಿಗಳು ಸದನದ ಒಳಗೆ ಹೋರಾಟ ಮಾಡಬೇಕು. ತಮ್ಮ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಸದನಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ಕೊಡಬೇಕು.
-ಅಹಿಂದ ಜವರಪ್ಪ, ಸಾಮಾಜಿಕ ಹೋರಾಟಗಾರ
ರಾಜ್ಯದಲ್ಲಿ 2.5 ಲಕ್ಷ ಉದ್ಯೋಗಗಳು ಖಾಲಿ ಇವೆ. ಒಳ ಮೀಸಲಾತಿ ತೀರ್ಮಾನ ಆದ ನಂತರ ಸಮರೋಪಾದಿಯಲ್ಲಿ ಸರಕಾರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಬೇಕು. ಕಾರ್ಮಿಕ ನೀತಿ ಸಂಪೂರ್ಣ ಬದಲಾಗಬೇಕು. ಎಂಎಸ್‌ಎಂಇಗಳಿಗೆ ಹೆಚ್ಚಿನ ಹಣ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ನಮ್ಮ ಕೃಷಿ ಒಳಗಡೆ ಕನಿಷ್ಠ ಆದಾಯ ತರಲು ಎಂಎಸ್‌ಪಿ ಜಾರಿಗೆ ತರಬೇಕು. ಕಳೆದ ಬಜೆಟ್‌ನಲ್ಲಿ 11 ಲಕ್ಷ ಜಮೀನು ಸರಕಾರ ಒಡೆತನದಲ್ಲಿದೆ ಎಂದು ಹೇಳಲಾಗಿದೆ. ನಾಡಿನಲ್ಲಿ 16 ಲಕ್ಷ ಜನರು ಭೂರಹಿತರಿದ್ದು, ಅವರಿಗೆ ಭೂಮಿಯನ್ನು ಮಂಜೂರು ಮಾಡಬೇಕು.
-ಶಿವಸುಂದರ್, ಪ್ರಗತಿಪರ ಚಿಂತಕ.
ಮೂರು ವಾರಗಳ ಕಾಲ ನಡೆದ ವಿಧಾನಸಭಾ ಕಲಾಪದಲ್ಲಿ ಕೇವಲ ಅರ್ಧ ದಿನ ಮಾತ್ರ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯ ಚರ್ಚೆಗಳಾದವು. ಉಳಿದ ಹದಿನಾಲ್ಕೂವರೆ ದಿನ ಬೇಡದ ವಿಚಾರಗಳ ಚರ್ಚೆ ನಡೆದಿದೆ.
-ದರ್ಶನ್ ಪುಟ್ಟಣ್ಣಯ್ಯ, ಶಾಸಕ
ಪರ್ಯಾಯವಾದ ರಾಜಕೀಯವನ್ನು ವ್ಯವಸ್ಥೆ ಕಟ್ಟುವ ಅವಶ್ಯಕತೆ ಇದೆ. ಸಮ ಸಮಾಜಕ್ಕಾಗಿ ರಾಜಕೀಯ ಚಳವಳಿ ಆರಂಭವಾಗಬೇಕಿದೆ.
- ಚೇತನ್ ಅಹಿಂಸ, ನಟ ಹಾಗೂ ಹೋರಾಟಗಾರ.