ಮೈಸೂರು : ತಪ್ಪೇ ಮಾಡದಿದ್ದರೂ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿ

Update: 2025-04-04 17:32 IST
ಮೈಸೂರು : ತಪ್ಪೇ ಮಾಡದಿದ್ದರೂ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿ

ಸಾಂದರ್ಭಿಕ ಚಿತ್ರ

  • whatsapp icon

ಮೈಸೂರು: ಪೊಲೀಸರ ಎಡವಟ್ಟಿನಿಂದ ವ್ಯಕ್ತಿಯೊಬ್ಬರು ಪತ್ನಿ ಹತ್ಯೆ ಆರೋಪದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ಇದೀಗ ʼಮೃತಪಟ್ಟಿದ್ದʼ ಪತ್ನಿ ಪ್ರಿಯಕರನೊಂದಿಗೆ ಪ್ರತ್ಯಕ್ಷಗೊಂಡಿರುವ ಘಟನೆ ನಡೆದಿದೆ.

ಮಲ್ಲಿಗೆ ಎಂಬಾಕೆ ಕೊಲೆಯಾದ ಐದು ವರ್ಷದ ಬಳಿಕ ಪ್ರತ್ಯಕ್ಷಗೊಂಡ ಪತ್ನಿಯಾಗಿದ್ದು, ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಯುವಕ ಸುರೇಶ್‌ ಎಂಬವರನ್ನು 18 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, 2020 ರ ನವೆಂಬರ್‌ನಲ್ಲಿ ಇದ್ದಕ್ಕಿದ್ದಂತೆ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಾಳೆ. ಹಾಗಾಗಿ ಪತಿ ಸುರೇಶ್ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಒಂದಷ್ಟು ದಿನ ಹುಡುಕಿದರೂ ಮಲ್ಲಿಗೆ ಸಿಕ್ಕಿಲ್ಲ. ಹಾಗಾಗಿ ಎಲ್ಲರೂ ಸುಮ್ಮನಾಗಿದ್ದರು ಎನ್ನಲಾಗಿದೆ

ಸುರೇಶ್‌ ಜೈಲು ಪಾಲು:

2021ರ ಜೂನ್‌ನಲ್ಲಿ ಕುಶಾಲನಗರಕ್ಕೆ ಬಂದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಸುರೇಶ್‌ ಅವರನ್ನು ʼಮಹಿಳೆಯೊಬ್ಬರ ಮೃತದೇಹ ಸಿಕ್ಕಿದೆʼ ಎಂದು ಹಾಗಾಗಿ ಆ ಮಹಿಳೆಯ ಗುರುತು ಪತ್ತೆ ಮಾಡುವಂತೆ ಕರೆದುಕೊಂಡು ಹೋಗಿದ್ದರು. ಇದೇ ಪ್ರಕರಣದಲ್ಲಿ 2021ರ ಜು.18ರಲ್ಲಿ ಬೆಟ್ಟದಪುರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿ ನಂತರ ಅವರು ಜೈಲು ಸೇರಿದ್ದರು.

ಡಿಎನ್ಎ ಪರೀಕ್ಷೆಯಿಂದ ರಹಸ್ಯ ಬಯಲು:

ಜೈಲುಪಾಲಾದ ಸುರೇಶ್ ಪರ ವಾದ ವಕೀಲ ಪಾಂಡು ಪೂಜಾರಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. 2022ರ ಜನವರಿಯಲ್ಲಿ ವಕೀಲರ ಮನವಿಯ ಹಿನ್ನಲೆಯಲ್ಲಿ ನ್ಯಾಯಲಯ ಮಹಿಳೆಯ ಅಸ್ತಿಪಂಜರ ಹಾಗೂ ಮಲ್ಲಿಗೆಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ʼಮೃತದೇಹ ಮಲ್ಲಿಗೆಯದ್ದಲ್ಲʼ ಎಂಬ ವರದಿ ಸಹ ಬಂದಿತ್ತು. ಈ ವೇಳೆಗಾಗಲೇ ಎರಡು ವರ್ಷ ಸುರೇಶ್‌ ಅವರು ಹತ್ಯೆ ಆರೋಪದಡಿ ಜೈಲು ಶಿಕ್ಷೆ ಅನುಭವಿಸಿದ್ದರು. ಈ ವೇಳೆ 2023ರಲ್ಲಿ ಹೈಕೋರ್ಟ್ ಮೂಲಕ ಸುರೇಶ್ ಅವರು ಜಾಮೀನಿನ ಮೇಲೆ ಹೊರ ಬಂದಿದ್ದರು. ಬಳಿಕ ʼಮೃತ ಮಹಿಳೆ ತನ್ನ ಹೆಂಡತಿಯಲ್ಲ. ತಾನು ಕೊಲೆ ಮಾಡಿಲ್ಲ, ಹೆಂಡತಿಯನ್ನು ಹುಡುಕಿಕೊಡಿʼ ಎಂದು ಸುರೇಶ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದರು.

ಪತ್ನಿ ಕಂಡು ಪತಿಗೆ ಶಾಕ್: ಮೃತಪಟಿದ್ದಾಳೆ ಎಂಬುದಾಗಿ ಭಾವಿಸಲಾಗಿದ್ದ ಪತ್ನಿ ಮಲ್ಲಿಗೆ ಜೀವಂತವಾಗಿ ಮಡಿಕೇರಿಯ ಹೋಟೆಲ್‌ವೊಂದಲ್ಲಿ ಪ್ರಿಯಕರನೊಂದಿಗೆ ಎಪ್ರಿಲ್ 1 ರಂದು ತಿಂಡಿ ತಿನ್ನುತ್ತಾ ಇರುವುದು ಕಂಡ ಪತಿ ಸುರೇಶ್ ಸ್ನೇಹಿತರು ಶಾಕ್‌ ಆಗಿದ್ದಾರೆ. ತಕ್ಷಣ ಸುರೇಶ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಬಳಿಕ ಮಡಿಕೇರಿ ಪೊಲೀಸರಿಗೆ ವಿಷಯ ಮುಟ್ಟಿಸಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆಯಲ್ಲಿ ಪ್ರಿಯಕರ ಗಣೇಶನ ಜೊತೆ ವಿರಾಜಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ವಾಸವಿರುವುದಾಗಿ ಹೇಳಿದ್ದಾಳೆ.

ಸದ್ಯ ಮಲ್ಲಿಗೆಯನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಬೆಟ್ಟದಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮಲ್ಲಿಗೆಯನ್ನು ಮೈಸೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  ಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಹೆಚ್ಚುವರಿ ತನಿಖೆ ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News