ಬಿಜೆಪಿಯವರು ಡಿಕೆಶಿ ಹೇಳಿಕೆ ತಿರುಚಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ : ಎಂ.ಲಕ್ಷ್ಮಣ್

ಮೈಸೂರು: ಬಿಜೆಪಿ ನಾಯಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರ ಹೇಳಿಕೆ ತಿರುಚಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.
ನಗರ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅಧ್ಯಕ್ಷರಾದಾಗ ವಿರೋಧಿಸಿದವರು ಯಾರು? ದೇಶಕ್ಕೆ ಸಂವಿಧಾನ ಸಮರ್ಪಿಸಿದಾಗ ವಿರೋಧಿಸಿದವರು ಯಾರು? ಸಂವಿಧಾನ ಬದಲಿಸಲು ನಾವು ಬಂದಿರುವುದು ಹೇಳಿದ್ದು ಬಿಜೆಪಿ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ. ಸಂಸತ್‌ನಲ್ಲಿ ಅಂಬೇಡ್ಕರ್ ಮೇಲಿನ ಅಸಹನೆ ಹೊರಹಾಕಿದ್ದು ಗೃಹ ಮಂತ್ರಿ ಅಮಿತ್ ಶಾ ಎಂದು ವಿವರಿಸಿದರು.
ಡಿ.ಕೆ.ಶಿವಕುಮಾರ್ ಅವರು ಸಂವಿಧಾನದ ಪರಿಮಿತಿಯಲ್ಲಿ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಸಂವಿಧಾನದಲ್ಲಿ ಎದುರಾಗುವ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಸಂವಿಧಾನ ತಿದ್ದುಪಡಿ ಮಾಡಬಹುದು. ಬದಲಿಸಲು ಅವಕಾಶ ಇಲ್ಲ ಎಂದು ಹೇಳಿದರು.
ಇಲ್ಲಿಯವರೆಗೆ ಸಂವಿಧಾನಕ್ಕೆ 104 ತಿದ್ದುಪಡಿಗಳಾಗಿವೆ. ಕಾಂಗ್ರೆಸ್ 70, ಬಿಜೆಪಿಯೇತರ ಪಕ್ಷಗಳು 34 ತಿದ್ದುಪಡಿ ಮಾಡಿವೆ. ಸಂವಿಧಾನ ಬದಲು ಮಾಡುವ, ತಿದ್ದುಪಡಿ ಮಾಡುವ ಅಧಿಕಾರ ಇರುವುದು ಸಂಸತ್‌ಗೆ. ಕೇಂದ್ರದಲ್ಲಿ ಯಾವ ಸರಕಾರ ಅಧಿಕಾರದಲ್ಲಿದೆ? ಬಿಜೆಪಿಯವರಿಗೆ ಈ ಸಂಗತಿಗಳು ತಿಳಿದೇ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದ ಟಾಪ್ 10 ಮಂತ್ರಿಳಲ್ಲಿ ಒಬ್ಬರು ಹಿಂದುಳಿದ ವರ್ಗ, ದಲಿತರಿಲ್ಲ. 27 ಒಬಿಸಿ, ಎಸ್ಸಿ, ಎಸ್ಟಿ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ. ಇವರು ಕ್ಯಾಬಿನೆಟ್ ಸಚಿವರಲ್ಲ. ರಾಜ್ಯ ಸಚಿವರಾಗಿದ್ದಾರೆ. ಪ್ರಧಾನಿ ಕಚೇರಿಯ 112 ಐಎಎಸ್ ಅಧಿಕಾರಿಗಳು ಒಂದೇ ಸಮುದಾಯದವರಿದ್ದಾರೆ. ಇದಕ್ಕೆ ಉತ್ತರ ಕೊಡುವಂತೆ ಸವಾಲು ಹಾಕಿದರು.
ನಗರಾಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಎನ್.ಭಾಸ್ಕರ್, ಮಾಧ್ಯಮ ವಕ್ತಾರ ಕೆ.ಮಹೇಶ್, ಸೇವಾದಳದ ಗಿರೀಶ್ ಇದ್ದರು.
ಆರ್.ಅಶೋಕ ಆರೋಗ್ಯ ಪರೀಕ್ಷಿಸಿಕೊಳ್ಳಲಿ :
ಹನಿಟ್ರ‍್ಯಾಪ್ ಬಗ್ಗೆ ಮಾತಾಡುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಅವರು, ಅಶೋಕ್ ಅವರ ದೇಹದಲ್ಲಿ ಬದಲಾವಣೆ ಕಾಣುತ್ತಿದ್ದು, ಆರೋಗ್ಯ ಪರೀಕ್ಷಿಸಿಕೊಂಡರೆ ಒಳ್ಳೆಯದು. ಶಾಸಕ ಮುನಿರತ್ನ ಬಳಿ ಹನಿಟ್ರ‍್ಯಾಪ್, ಸಿಡಿ ಕಂಪನಿ ಇದೆ. ಮಹಿಳೆಯರ ಮೂಲಕ ಎಚ್‌ಐವಿ ಇಂಜೆಕ್ಷನ್ ಹಾಕಲಾಗಿದೆ ಎಂದು ಹೇಳುತ್ತಾರೆ. ಹಾಗಾಗಿ ಅಶೋಕ್ ಅವರು ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.