ಹಿಂದೂಗಳನ್ನು ಗುರಿ ಮಾಡಲು ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕು: ಜನಿವಾರ ವಿವಾದಕ್ಕೆ ಸಂಸದ ಯದುವೀರ್ ಪ್ರತಿಕ್ರಿಯೆ

Update: 2025-04-20 22:14 IST
ಹಿಂದೂಗಳನ್ನು ಗುರಿ ಮಾಡಲು ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕು: ಜನಿವಾರ ವಿವಾದಕ್ಕೆ ಸಂಸದ ಯದುವೀರ್ ಪ್ರತಿಕ್ರಿಯೆ

 ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Photo: X/@yaduveerwadiyar)

  • whatsapp icon

ಮೈಸೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲು ಬಂದ ವಿದ್ಯಾರ್ಥಿಗಳು ಜನಿವಾರ ಧರಿಸಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ಕೊಡದೇ, ಅದನ್ನು ಕಿತ್ತೆಸೆದ ಅಧಿಕಾರಿಗಳ ದುರ್ನಡತೆ ಸಹಿಸಲಸಾಧ್ಯ. ಇದು ಇಡೀ ಬ್ರಾಹ್ಮಣ ಸಮುದಾಯಕ್ಕೆ ಮಾತ್ರವಲ್ಲ, ಹಿಂದೂ ಸಮುದಾಯಕ್ಕೆ ಎಸಗಿರುವ ದ್ರೋಹ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ಕುರಿತು ಮೈಸೂರು ಬಿಜೆಪಿ ಘಟಕದ ವತಿಯಿಂದ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಯದುವೀರ್‌ ಒಡೆಯರ್‌, ಇದು ಸರ್ಕಾರದ ಕುಮ್ಮಕ್ಕಿನಿಂದಲೇ ನಡೆದಿರುವ ದುಷ್ಕೃತ್ಯ ಎಂದು ಆರೋಪಿಸಿದ್ದಾರೆ.

ಮೊದಲಿಗೆ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿಗೆ ಸರಿಯಾದ ನ್ಯಾಯ ಒದಗಿಸಿಕೊಡಬೇಕು. ಈ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಯದುವೀರ್‌ ಒತ್ತಾಯಿಸಿದ್ದಾರೆ.

ಜನಿವಾರ ಎನ್ನುವುದು ಬ್ರಾಹ್ಮಣ ಸಮುದಾಯದವರಿಗೆ ಅತ್ಯಂತ ಪವಿತ್ರವಾದುದು. ಇದನ್ನು ಧರಿಸುವ ಮುನ್ನ ಹೋಮ-ಹವನಗಳನ್ನು ಮಾಡಿ ಅತ್ಯಂತ ಸಂಪ್ರದಾಯಬದ್ಧ ಹಾಗೂ ಶಾಸ್ತ್ರೋಕ್ತವಾಗಿ, ಶ್ರದ್ಧಾಭಕ್ತಿಗಳಿಂದ ಈ ಪವಿತ್ರ ಜನಿವಾರವನ್ನು ಧರಿಸಲಾಗುತ್ತದೆ. ಇದಕ್ಕೆ ವಿಶೇಷ ಹಾಗೂ ದೈವೀಕ ಸ್ಥಾನವಿರುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

ಇಂಥ ಪವಿತ್ರ ಜನಿವಾರವನ್ನು ಜಾತಕ, ಗುರುಬಲ, ನೋಡಿ ದಿನಾಂಕ ನಿರ್ಧರಿಸಿ ಬ್ರಾಹ್ಮಣರು ಧರಿಸುತ್ತಾರೆ. ಬ್ರಾಹ್ಮಣ ಸಂಪ್ರದಾಯವನ್ನು ಧಿಕ್ಕರಿಸಿ ಇಂಥ ಜನಿವಾರವನ್ನು ಕಿತ್ತೆಸದ ಅಧಿಕಾರಿಗಳ ವರ್ತನೆ ಖಂಡನೀಯ ಹಾಗೂ ಆಕ್ಷೇಪಾರ್ಹ ಎಂದು ಯದುವೀರ್‌ ವಿವರಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಬೀದರ್‌ ಮತ್ತು ಶಿವಮೊಗ್ಗದ ತೀರ್ಥಹಳ್ಳಿಯ ಘಟನೆ. ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಇಂಥ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಓಲೈಕೆಯಲ್ಲಿ ಮುಳುಗಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಹಿಂದೂಗಳು ಕಾಣಿಸುತ್ತಲೇ ಇಲ್ಲ. ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಯಾರೊಬ್ಬರು ಕೂಡ ಈ ಘಟನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಬ್ರಾಹ್ಮಣ ಸಮುದಾಯದ ಜೊತೆಗೆ ನಾವು ಸದಾ ನಿಂತಿರುತ್ತೇವೆ ಎಂದು ಸಂಸದ ಯದುವೀರ್‌ ಹೇಳಿದ್ದಾರೆ.

ಧರ್ಮ, ಜಾತಿ, ಸಮುದಾಯಕ್ಕೆ ಗೌರವ ನೀಡುವುದು ನಮ್ಮ ಪಕ್ಷದ ಬದ್ಧತೆಯಾಗಿದೆ. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಅಲ್ಪಸಂಖ್ಯಾತರ ಮೇಲೆ ಮಾತ್ರ ಪ್ರೀತಿ ಉಕ್ಕಿ ಬರುತ್ತದೆ. ಹಿಂದೂಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಯದುವೀರ್‌ ಆರೋಪಿಸಿದ್ದಾರೆ.

ಜನಿವಾರ ಕಿತ್ತು ಎಸೆದಿರುವ ಪ್ರಕರಣದ ಕುರಿತು ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಸಂಸದ ಯದುವೀರ್‌ ಒಡೆಯರ್‌ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News