ಚಾಮರಾಜನಗರ | ʼಅರಮನೆ ಜಮೀನುʼ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ: ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

Update: 2025-04-14 14:22 IST
ಚಾಮರಾಜನಗರ | ʼಅರಮನೆ ಜಮೀನುʼ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ: ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ
  • whatsapp icon

ಮೈಸೂರು : ಚಾಮರಾಜನಗರ ಜಿಲ್ಲೆಯಲ್ಲಿರುವ ಅರಮನೆಗೆ ಸೇರಿದ ಜಮೀನನ್ನು ಮಾತ್ರ ನಮ್ಮ ವಶಕ್ಕೆ ಪಡೆಯುವ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದರು.

ನಗರದ ಅರಮನೆ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಯಾವುದೇ ಗ್ರಾಮವನ್ನು ನಮ್ಮ ವಶಕ್ಕೆ ನೀಡುವಂತೆ ಕೇಳಿಲ್ಲ, 1951 ಇಸವಿಯ ದಾಖಲೆಗಳ ಆಧಾರದ ಮೇಲೆ ನಮ್ಮ ಜಮೀನು ವಶಕ್ಕೆ ಪಡೆಯಲು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಈ ಸಂಬಂಧ 2014ರಲ್ಲಿಯೂ ಸಂಬಂಧಪಟ್ಟ ತಹಶೀಲ್ದಾರ್, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದೇನೆ. ಅಂದಿನ ಮಹಾರಾಜರು ದಾನವಾಗಿ ಗ್ರಾಮಸ್ಥರಿಗೆ ಜಮೀನು ಕೊಟ್ಟಿದ್ದರೆ, ಕಿತ್ತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಒಂದು ವೇಳೆ ಜಮೀನು ನಮಗೆ ಸೇರಿದ್ದರೂ ಅಲ್ಲಿನ ಜನತೆ ಆತಂಕಪಡುವ ಅಗತ್ಯವಿಲ್ಲ. ಆ ಜಮೀನನ್ನು ರಾಜ್ಯ ಸರಕಾರ ನಮಗೆ ನೀಡಿದರೂ ಕೂಡ ಅಲ್ಲಿನ ಜನರಿಗೆ ತೊಂದರೆ ಕೊಡುವುದಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ. ಅಲ್ಲಿನ‌ ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದರು.

ಕಂದಾಯ ಗ್ರಾಮ ಮಾಡುವುದಾಗಿ ಚಾಮರಾಜನಗರ ಜಿಲ್ಲಾಡಳಿತ ಹೇಳಿದ್ದರಿಂದ ನಮ್ಮ ಜಮೀನು ಅಲ್ಲಿರುವ ಕಾರಣ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಯಾವುದೇ ವಿಚಾರವಿದ್ದರೂ, ಸಮಸ್ಯೆಗಳಿದ್ದರೂ ಆ ಭಾಗದ ಗ್ರಾಮಸ್ಥರು ನಮ್ಮನ್ನು ನೇರವಾಗಿ ಸಂಪರ್ಕಿಸಲಿ. ಗ್ರಾಮಸ್ಥರ ಬಳಿಯಿರುವ ದಾಖಲೆಗಳ ಬಗ್ಗೆ ನಮಗೆ ಗೊತ್ತಿಲ್ಲ. ಯಾವುದೇ ಕಾರಣಕ್ಕೂ ಆ ಭಾಗದ ಗ್ರಾಮಸ್ಥರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.

17-05-1951ನೇ ಇಸವಿಯಲ್ಲಿ ಅಂದಿನ‌ ಸರಕಾರದ ಮುಖ್ಯ ಕಾರ್ಯದರ್ಶಿ ಶ್ರೀನಿವಾಸ್ ಅವರೇ ಅರಮನೆಗೆ ಸೇರಿದ ಆಸ್ತಿ ಪತ್ರವನ್ನು ಗುರುತು ಮಾಡಿ ನಮಗೆ ದಾಖಲೆ ನೀಡಿದ್ದಾರೆ. ಅದರ ಆಧಾರದ ಮೇಲೆ ನಮ್ಮ ಆಸ್ತಿಗಳನ್ನು ನಾವು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದ್ದೇವೆ. ಚಾಮರಾಜನಗರದಲ್ಲಿರುವ ಆಸ್ತಿಗಳನ್ನು ನಮ್ಮ ವಶಕ್ಕೆ ಪಡೆಯಲು ಮುಂದಾಗಿದ್ದೇವೆ ಎಂದರು.

ನಮಗೆ ಸೇರಿದ ಜಮೀನು ವಿಚಾರಕ್ಕೆ ದಾಖಲೆ ಆಧಾರ ಮೇಲೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಯಾವ ಕಾರಣಕ್ಕೆ ಅವರು ನಮ್ಮಲ್ಲಿ ದಾಖಲೆಗಳಿಲ್ಲ ಎಂದು ಹೇಳಿದ್ದಾರೊ ಗೊತ್ತಿಲ್ಲ. ಅವರಿಗೆ ಮಾಹಿತಿ ಇಲ್ಲದೆ ಇರಬಹುದು. ಈ ಸಂಬಂಧ ಮಾರ್ಚ್‌ 25 ರಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ದೂರವಾಣಿ ಮಸೇಜ್ ಸಹ ಮಾಡಿದ್ದೇನೆ. ಆದರೆ ಅವರು ಅದನ್ನು ಸ್ವೀಕರಿಸಿಲ್ಲ. ನಂತರ ಗುಂಡ್ಲುಪೇಟೆ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆಯೂ ಮಸೇಜ್ ಮಾಡಿದ್ದೇನೆ. ಆಗ ಮೆಸೇಜ್ ಸ್ವೀಕರಿಸಿದ್ದಾರೆ. ಆದರೆ ಆವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯಲ್ಲಿ ನಮ್ಮ ಆಸ್ತಿ ಎಲ್ಲೆಲ್ಲಿದೆ ಎಂಬುದರ ಬಗ್ಗೆ ನಮಗೂ ಮಾಹಿತಿ ಇಲ್ಲ.‌ ಆದರೆ ದಾಖಲೆಗಳಿವೆ. ಆ ದಾಖಲೆಗಳ ಆಧಾರದ ಮೇಲೆ ನಮ್ಮ ಆಸ್ತಿಗಳನ್ನು ನಮಗೆ ನೀಡುವಂತೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಅಲ್ಲಿನ ಜನರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಅಲ್ಲಿನ ಜನರಿಗೆ ಆತಂಕ ಇದ್ದರೆ ಸರಕಾರದ ಮಧ್ಯಸ್ಥಿಕೆ ಬಿಟ್ಟು ನೇರವಾಗಿಯೇ ಬಂದು ನಮ್ಮನ್ನು ಭೇಟಿಯಾದರೆ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

ನನ್ನಿಂದ ಮತ್ತು ನನ್ನ ತಾಯಿಯಿಂದ ಯಾವುದೇ ರೀತಿಯ ತೊಂದರೆ ಆಗವುದಿಲ್ಲ: ಯದುವೀರ್

ಚಾಮರಾಜನಗರ ಜಿಲ್ಲೆಯ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಆ ಭಾಗದ ಜನರು ಆತಂಕ ಪಡುವ ಅಗತ್ಯವಿಲ್ಲ. ನನ್ನಿಂದ ಅಥವಾ ನನ್ನ ತಾಯಿಯಿಂದ ಯಾವುದೇ ಅನಾನುಕೂಲವಾಗುವುದಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

ತಾಯಿ ನಮಗೆ ಸೇರಿದ ಜಾಗವಿದೆ ಎಂದು ಪತ್ರ ಬರೆದಿದ್ದಾರೆ. ಪತ್ರ ಬರೆದ ಕಾರಣಕ್ಕೆ ಆತಂಕ ಪಡಬೇಕಿಲ್ಲ. ಅಲ್ಲಿನ ಜನರಿಗೆ ನಾವು ಯಾವುದೇ ತೊಂದರೆ ಕೊಡುವುದಿಲ್ಲ. ಡಿಸಿ ಅವರು ವರದಿ ಕೊಡಲಿ, ಅದನ್ನು ಬಿಟ್ಟು ಕೆಲವರು ಆತಂಕ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News