ಸಿಎಂ ಕುರ್ಚಿಗೆ ಯಾವ ಆಪತ್ತು ಬಂದಿಲ್ಲ, ಸಿದ್ದರಾಮಯ್ಯ ಜೊತೆ ಹೈಕಮಾಂಡ್ ಇದೆ : ಡಾ.ಯತೀಂದ್ರ

ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಯಾವ ಆಪತ್ತು ಬಂದಿಲ್ಲ. ಸಿಎಂ ಕುರ್ಚಿ ಸುರಕ್ಷಿತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಮುಂದೆ ತಂದಿದ್ದಾರೆ ಎಂಬ ವಿಪಕ್ಷ ನಾಯಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುರ್ಚಿಗೆ ಈಗ ಏನು ಆಪತ್ತು ಬಂದಿದೆ? ಮುಡಾ ಸುಳ್ಳು ಕೇಸ್ ಹಾಕಿದಾಗಲೂ ನಮ್ಮ ಶಾಸಕರು, ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿದ್ದಾರೆ. ಈಗಂತೂ ಸಿಎಂ ಕುರ್ಚಿಗೆ ಯಾವುದೇ ಆಪತ್ತು ಇಲ್ಲ. ಹಾಗಾಗಿ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಮುಂದೆ ತಂದಿದ್ದಾರೆ ಎಂಬುದು ಸುಳ್ಳು ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಈ.ಡಿ. ತನಿಖೆ ಸಂಬಂಧ ಕೋರ್ಟ್ ಆದೇಶ ಕಾಯ್ದಿರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಡಾ ಕೇಸ್‌ನಲ್ಲಿ ಏನೂ ಸತ್ಯಾಂಶ ಇಲ್ಲ. ಈಡಿಯವರು ಬೇಕಂತಲೇ ಕಿರುಕುಳ ಕೊಡುತ್ತಿದ್ದಾರೆ. ನಾವು ಕಾನೂನಾತ್ಮಕ ಹೋರಾಟ ಮುಂದುವರೆಸುತ್ತೇವೆ. ಈ.ಡಿ ತನಿಖೆ ಅದರ ಪಾಡಿಗೆ ನಡೆಯುತ್ತದೆ, ಸಿದ್ದರಾಮಯ್ಯ ತಮ್ಮ ಕುರ್ಚಿಯಲ್ಲಿ ಮುಂದುವರೆಯುತ್ತಾರೆ. ನಾವು ತಪ್ಪು ಮಾಡಿಲ್ಲ. ಹಾಗಾಗಿ ಹೆದರುವ ಪ್ರಶ್ನೆಯೇ ಇಲ್ಲ. ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲೆಲ್ಲಿ ಬಿಜೆಪಿಯೇತರ ಸರಕಾರಗಳಿವೆ, ಅಲ್ಲಿ ತೊಂದರೆ ಕೊಡುತ್ತಲೇ ಬಂದಿದ್ದಾರೆ ಎಂದರು.
ಜಾತಿಗಣತಿ ಮೂಲ ಪ್ರತಿ ಸಿದ್ದರಾಮಯ್ಯ ಅವರ ಮನೆಯಲ್ಲಿದೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಜಾತಿಗಣತಿ ಮೂಲ ಪ್ರತಿಯನ್ನು ಹಿಂದುಳಿದ ವರ್ಗಗಳ ಆಯೋಗವನ್ನು ಕೇಳಬೇಕು. ಮೂಲಪ್ರತಿ ಇಲ್ಲದಿದ್ದರೂ ಡೇಟಾ ಕಂಪ್ಯೂಟರ್‌ನಲ್ಲಿ ಶೇಖರಿಸಿರಬಹುದು. ಅದಕ್ಕೆ ಸ್ಪಷ್ಟನೆಯನ್ನು ಆಯೋಗದ ಅಂದಿನ ಮುಖ್ಯಸ್ಥರು ನೀಡುತ್ತಾರೆ. ಈ ರೀತಿಯ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಸಿಎಂ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಪ್ರಬಲ ವರ್ಗಕ್ಕೆ ಅನ್ಯಾಯ ಮಾಡಿಬಿಡುತ್ತಾರೆ ಎಂಬುದು ಪೂರ್ವಗ್ರಹ ಪೀಡಿತ. ಜಾತಿಗಣತಿಯಿಂದ ಅನುಕೂಲ ಆಗುತ್ತೆ. ಯಾರಿಗೂ ಅನ್ಯಾಯ ಆಗುವುದಿಲ್ಲ. ಸಮೀಕ್ಷೆಯಲ್ಲಿ ಜಾತಿಗಣತಿ ಒಂದು ಭಾಗ ಮಾತ್ರ. ಪ್ರತಿ ಜಾತಿಗಳ ಸಂಖ್ಯೆ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಸ್ಥಿತಿಗತಿ ತಿಳಿಯಲು ಇದರಿಂದ ಸಾಧ್ಯ. ಇದೆಲ್ಲವನ್ನು ಮಾಡಿ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದ್ದಾರೆ. ಹಿಂದುಳಿದ ವರ್ಗಕ್ಕೆ ಲಿಂಗಾಯತರು, ಒಕ್ಕಲಿಗರು ಕೂಡ ಸೇರಿಕೊಳ್ಳುತ್ತಾರೆ ಎಂದರು.
ಜನಿವಾರ ಹಾಗೂ ಹಿಜಾಬ್ ಘಟನೆಯಲ್ಲೂ ನಮ್ಮ ನಿಲುವು ಒಂದೇ. ಜನಿವಾರ ತೆಗೆಸಿದವರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಹಿಜಾಬ್ ವಿಚಾರದಲ್ಲಿ ಬಿಜೆಪಿಯವರು ಬದ್ಧತೆಯಿಂದ ನಡೆದುಕೊಳ್ಳಲಿಲ್ಲ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ.
-ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ.