‘ಎಚ್‌ಡಿಕೆಯಿಂದ 200 ಎಕರೆ ಭೂಮಿ ಒತ್ತುವರಿ’ ಬಿಜೆಪಿಯವರ ಹೋರಾಟ ಯಾವಾಗ?: ಎಂ.ಲಕ್ಷ್ಮಣ್

ಮೈಸೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯ ಕೇತಗಾನಹಳ್ಳಿಯಲ್ಲಿ 200 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ಕೊಟ್ಟಿರುವ 14 ನಿವೇಶನಗಳ ವಿಚಾರವಾಗಿ ಬಿಜೆಪಿಯವರು ದೊಡ್ಡ ಆಂದೋಲನ ಮಾಡಿದರು. ಈಗ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆ ಹೇಳುತ್ತಿದೆ. ಯಾವಾಗ ಹೋರಾಟ ಆರಂಭಿಸುತ್ತೀರಿ ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಬಂದ್ ಮುಂದೂಡಲು ಮನವಿ
ಮಾ.22ರಂದು ನಿಗದಿಪಡಿಸಲಾಗಿದ್ದ ಕರ್ನಾಟಕ ಬಂದ್ ಅನ್ನು ಮುಂದೂಡಬೇಕು. ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ಬೇಡ. ಇನ್ನೊಂದು ದಿನ ಬಂದ್ ನಡೆಯಲಿ. ಅದಕ್ಕೆ ನಮ್ಮ ಬೆಂಬಲ ಕೂಡ ಇದೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಎಂ.ಲಕ್ಷ್ಮಣ್ ಮನವಿ ಮಾಡಿದರು.