ನ್ಯಾ.ನಾಗಮೋಹನ್ ದಾಸ್ ಮಧ್ಯಂತರ ವರದಿ ಬಳಿಕ ಒಳಮೀಸಲಾತಿ ಜಾರಿಗೆ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್‌

Update: 2025-03-24 18:18 IST
ನ್ಯಾ.ನಾಗಮೋಹನ್ ದಾಸ್  ಮಧ್ಯಂತರ ವರದಿ ಬಳಿಕ ಒಳಮೀಸಲಾತಿ ಜಾರಿಗೆ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್‌
  • whatsapp icon

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದ್ದು, ತದನಂತರ ಮುಖ್ಯಮಂತ್ರಿಯವರು ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತಿಳಿಸಿದರು.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಸಭೆ ಬಳಿಕ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರಕಾರ ಬದ್ಧವಾಗಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಹೇಳಿದ್ದೇವೆ. ಎಂಪೆರಿಕಲ್ ಡೇಟಾ ನಿರ್ಧಿಷ್ಟವಾದ ಅಭಿಪ್ರಾಯ ಬರುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ಒಳಮೀಸಲಾತಿ ಜಾರಿ; ನಮ್ಮ ಸರಕಾರದ ಬದ್ಧತೆ 

ಸಚಿವ ಡಾ. ಹೆಚ್.ಸಿ.ಮಹದೆವಪ್ಪ ಅವರು ಮಾತನಾಡಿ, ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರ ಜೊತೆ ಸುಧೀರ್ಘ ಸಭೆ ನಡೆಸಲಾಗಿದೆ. ಒಳ‌ಮೀಸಲಾತಿ ಜಾರಿಗಾಗಿ ಈವರೆಗೂ ಆಗಿರುವ ಪ್ರಗತಿಯ ಮಾಹಿತಿಯನ್ನು ನಾಗ ಮೋಹನ್ ದಾಸ್ ಸಮಿತಿ ನೀಡಿದೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿಸಿದರು.

ದತ್ತಾಂಶ ಆಧಾರದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ ನಾಗಮೋಹನ್ ದಾಸ್ ಅವರು ವಾರದೊಳಗೆ ಮಧ್ಯಂತರ ವರದಿ ನೀಡುತ್ತಾರೆ. ಆ ವರದಿ ಮೇಲೆ ಒಳಮೀಸಲಾತಿ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಎಂಪೆರಿಕಲ್ ಡೇಟಾ‌ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚೆ ಮಾಡಿ, ನಮ್ಮ ಗಮನಕ್ಕೆ ತಂದಿದ್ದಾರೆ.‌ ನಾವು ಒಳ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಸರಕಾರದ ಬದ್ಧತೆ. ಯಾವುದೇ ಸಮುದಾಯವೂ ಇಷ್ಟೇ ಶೇಕಡಾ ಮೀಸಲಾತಿ ಕೊಡುವಂತೆ ಬೇಡಿಕೆ ಇಟ್ಟಿಲ್ಲ. ಬಹುತೇಕ ಎಲ್ಲಾ ಇಲಾಖೆಗಳು ದತ್ತಾಂಶ ನೀಡಿವೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಒಳಮೀಸಲಾತಿ ಜಾರಿ ಆಗುವವರೆಗೂ ಬ್ಯಾಕ್‌ಲಾಗ್ ಹುದ್ದೆ, ಮುಂಬಡ್ತಿ, ನೇಮಕಾತಿ ಯಾವುದನ್ನೂ ಮಾಡುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಶಿವರಾಜ್ ತಂಗಡಗಿ ಅವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News