ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧ: ಕೆ.ಎಚ್.ಮುನಿಯಪ್ಪ

Update: 2025-03-26 19:15 IST
ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧ: ಕೆ.ಎಚ್.ಮುನಿಯಪ್ಪ

ಕೆ.ಎಚ್.ಮುನಿಯಪ್ಪ

  • whatsapp icon

ಬೆಂಗಳೂರು: ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧವಾಗಿದ್ದಾರೆ. ಕಾಲಮಿತಿಯೊಳಗೆ ಒಳಮೀಸಲಾತಿ ಜಾರಿಯಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಬುಧವಾರ ನಗರದ ಲಿಡಕರ್ ಸಭಾಂಗಣದಲ್ಲಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಆಯೋಸಿದ್ದ ಒಳಮೀಸಲಾತಿ ಚಳವಳಿಯ ಮುಂದಿನ ಹೋರಾಟದ ಕುರಿತ ‘ಸಮಾಲೋಚನಾ ಸಭೆ’ಯಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷ, ಸಂಘ, ಸಂಸ್ಥೆಗಳ ಮುಖಂಡರು ಸಹಕರಿಸಿಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಜಾರಿಗೊಳಿಸಲು ಬದ್ಧರಾಗಿದ್ದು, ನ್ಯಾ.ನಾಗಮೋಹನ್ ದಾಸ್ ವೈಜ್ಞಾನಿಕವಾಗಿ ಸಂಪೂರ್ಣ ಪರಿಶೀಲಿಸಿ ತೀರ್ಮಾಣ ಮಾಡಲಿದ್ದಾರೆ ಎಂದು ಹೇಳಿದರು.

ಒಳಮೀಸಲಾತಿ ಜಾರಿಗಾಗಿ ನಾವು ಅಂತಿಮ ಘಟ್ಟದಲ್ಲಿ ಇದ್ದೇವೆ. 30 ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಗಲಿದೆ. ನಮ್ಮ ಸರಕಾರ ಒಂದು ಐತಿಹಾಸಿಕ ತೀರ್ಮಾನ ಮಾಡಲಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಒಮ್ಮತದ ಅಭಿಪ್ರಾಯ ಸೂಚಿಸಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಯಾರ ಮೇಲೆಯೂ ಸಂಶಯ ಪಡಬಾರದು ಎಂದು ಮನವರಿಕೆ ಮಾಡಿದರು.

ಪರಿಶಿಷ್ಟ ಜಾತಿಯ ಸಚಿವರು ಒಕ್ಕೊರಲಿನಿಂದ ಒಳಮೀಸಲಾತಿ ಪರವಾಗಿದ್ದು, ಯಾರೂ ಕೂಡ ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ. ಸರಕಾರ ಒಳಮೀಸಲಾತಿ ಅನುಷ್ಠಾನಕ್ಕೆ ಬದ್ಧವಾಗಿದೆ. ಸುಪ್ರೀಂ ಕೋರ್ಟ್‍ನ ಆದೇಶವಿರುವುದರಿಂದ ಸರಿಯಾದ ದತ್ತಾಂಶಗಳ ಸಂಗ್ರಹಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಅನುಷ್ಠಾನ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.

ಒಳಮೀಸಲಾತಿ ವಿಷಯವು ಬಹಳ ಸೂಕ್ಷ್ಮವಾಗಿದೆ. ತರಾತುರಿಯಲ್ಲಿ ಜಾರಿಗೊಳಿಸಿ ಕೋರ್ಟ್‍ಗೆ ಹೋಗಬಾರದು ಎಂಬ ಉದ್ದೇಶದಿಂದ ಸರಿಯಾದ ಮಾಹಿತಿ ಸಂಗ್ರಹಿಸಿ ನಂತರ ಅನುಷ್ಠಾನ ಮಾಡಬೇಕಾಗುತ್ತದೆ. ನ್ಯಾ. ನಾಗಮೋಹನ್ ದಾಸ್ ರವರ ಮಧ್ಯಂತರ ವರದಿ ಸರಕಾರಕ್ಕೆ ಸಲ್ಲಿಸಿದ ನಂತರ ಯಾವ ರೀತಿಯ ತೀರ್ಮಾನ ಮಾಡಬೇಕು ಎಂಬುದನ್ನು ಚರ್ಚೆ ಮಾಡಬೇಕಾಗುತ್ತದೆ ಅಲ್ಲಿಯವರೆಗೂ ಶಾಂತವಾಗಿರಬೇಕು ಎಂದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಒಳಮೀಸಲಾತಿ ಜಾರಿ ಆಗುವವರೆಗೂ ಯಾವುದೇ ಭಡ್ತಿ, ಬ್ಯಾಕ್‍ಲಾಗ್ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲ ಸಚಿವರು ಒಳಮೀಸಲಾತಿ ಜಾರಿಗೆ ಬದ್ಧವಾಗಿದ್ದಾರೆ. ಒಳಮೀಸಲಾತಿ ಜಾರಿಯಾಗುತ್ತದೆ. ದತ್ತಾಂಶ ಇಲ್ಲದೇ ಜಾರಿಗೆ ಮಾಡಿದರೆ ಕೋರ್ಟ್‍ನಲ್ಲಿ ಸ್ಟೇ ಹಾಕುತ್ತಾರೆ. ಸಮುದಾಯವನ್ನು ಕೆಲವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.

ಯಾವುದೇ ವ್ಯಕ್ತಿಯನ್ನು ಟಾರ್ಗೆಟ್ ಮಾಡಬಾರದು. ಟಾರ್ಗೆಟ್ ಮಾಡಿದರೆ ಹೋರಾಟಗಳು ಯಶಸ್ವಿಯಾಗುವುದಿಲ್ಲ. ನ್ಯಾ.ಎಚ್.ಎನ್.ನಾಗಮೋಹನ್‍ದಾಸ್ ಆಯೋಗಕ್ಕೆ ಸಮಯಾವಕಾಶ ಕೊಡಿ, ಒಂದು ತಿಂಗಳು ಹೆಚ್ಚು ಕಡಿಮೆ ಆಗುತ್ತೆ. ಆದರೆ ಒಳಮೀಸಲಾತಿ ಜಾರಿಯಾಗುತ್ತದೆ. ಅವಸರದಲ್ಲಿ ಜಾರಿ ಮಾಡಿ, ಸಮಸ್ಯೆಯಾದರೆ ಯಾರು ಹೊಣೆ ಯಾಗುತ್ತಾರೆ ಎಂದರು.

ಸಭೆಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಕೇಶವಮೂರ್ತಿ, ನಿವೃತ್ತ ಅಧಿಕಾರಿಗಳಾದ ಗೋನಾಳ ಬೀಮಪ್ಪ, ಭೀಮಾಶಂಕರ್, ಸಿದ್ದರಾಜು, ಕೃಷ್ಣಪ್ಪ, ಕೇಶವ ಮೂರ್ತಿ, ದೇವರಾಜು, ಪಕೀರಪ್ಪ, ಗುರುಮೂರ್ತಿ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News