ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

Update: 2025-03-29 14:52 IST
ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಪ್ರಧಾನಿ ಮೋದಿ(PTI)/ಸಿದ್ದರಾಮಯ್ಯ

  • whatsapp icon

ಬೆಂಗಳೂರು: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವಾಗಿ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಚನ್ನಮ್ಮನವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿಗೆ ಸಶಸ್ತ್ರ ಪ್ರತಿರೋಧ ನೀಡಿದ ಪ್ರಥಮ ಮಹಿಳೆಯರಲ್ಲಿ ಒಬ್ಬರಾಗಿದ್ದರು. ಅವರ ಶೌರ್ಯ ಮತ್ತು ಅಚಲ ಆತ್ಮಸಂಭ್ರಮವು ದೇಶದ ಜನತೆಗೆ ಸದಾ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಈ ಮಹಾನ್ ನಾಯಕಿಯ ಸಮಾಧಿ ಕೇವಲ ಸಮಾಧಿಯಷ್ಟೇ ಅಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ಅಮರ ಚೇತನವನ್ನು ಪ್ರತಿನಿಧಿಸುವ ಪವಿತ್ರ ತಾಣವಾಗಿದೆ. 1824 ರಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧದ ಹೋರಾಟದಲ್ಲಿದ್ದ ಧೈರ್ಯ ಮತ್ತು ತ್ಯಾಗದ ಸಂಕೇತವಾಗಿದೆ. ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಪ್ರದೇಶಗಳ ಕಾಯ್ದೆ, 1958 ರ ಅಡಿಯಲ್ಲಿ ಈ ತಾಣವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ಘೋಷಿಸುವುದು, ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆಗೆ ಗೌರವ ಸಲ್ಲಿಸುವ ಮಹತ್ವದ ಹೆಜ್ಜೆಯಾಗಿರುತ್ತದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಈ ತಾಣವು ಅಪಾರ ಐತಿಹಾಸಿಕ ಮಹತ್ವವನ್ನು ಹೊಂದಿರುವುದರಿಂದ ಅದನ್ನು ಸರಿಯಾಗಿ ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಅಗತ್ಯವಿದೆ. ಈ ತಾಣವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸುವುದರಿಂದ, ಸಮಾಧಿಯ ಸಮಗ್ರತೆಯನ್ನು ಕಾಪಾಡಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದು ದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಾಗು ಆರ್ಥಿಕ ಪ್ರಗತಿಗೂ ಸಹಕಾರಿ ಯಾಗಬಹುದು. ಅದಕ್ಕಿಂತ ಪ್ರಮುಖವಾಗಿ, ಈ ತಾಣವು ಮುಂದಿನ ಪೀಳಿಗೆಗಳಿಗೆ ರಾಣಿ ಚೆನ್ನಮ್ಮನವರ ಶೌರ್ಯದ ಕುರಿತ ಶಿಕ್ಷಣವನ್ನು ನೀಡಲು ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸಲು ಕಾರಣವಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ತೀರ್ಮಾನವು ರಾಣಿ ಚೆನ್ನಮ್ಮನವರ ಪರಂಪರೆಯನ್ನು ಗೌರವಿಸುವುದರ ಜೊತೆಗೆ ಭಾರತದ ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು ಸಂರಕ್ಷಿಸುವ ಸರಕಾರದ ಬದ್ಧತೆಯನ್ನು ಪ್ರತಿಬಿಂಬಿಸುವುದು. ಕರ್ನಾಟಕವು ಸದಾ ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಪೋಷಿಸಿಕೊಂಡು ಬರುತ್ತಿದ್ದು, ಈ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸುವ ಮೂಲಕ ಆ ಹೆಮ್ಮೆ ಇನ್ನಷ್ಟು ಪ್ರಬಲಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ತಾವು ತಕ್ಷಣವೇ ಸಂಸ್ಕೃತಿ ಸಚಿವಾಲಯ ಮತ್ತು ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೂಲಕ ಈ ತಾಣದ ಮೌಲ್ಯಮಾಪನವನ್ನು ಮಾಡಿಸಿ, ಅದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ಘೋಷಿಸುವಂತೆ ಮನವಿ ಮಾಡುತ್ತಿದ್ದೇನೆ. ಕರ್ನಾಟಕದ ಜನರು ಮತ್ತು ದೇಶದ ನಾಗರಿಕರು ಈ ಮಹತ್ವದ ನಿರ್ಧಾರಕ್ಕಾಗಿ ನಿಮ್ಮ ಸಹಕಾರವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News