ʼಬೆಲೆ ಏರಿಕೆʼ ಖಂಡಿಸಿ ಬಿಜೆಪಿಯಿಂದ ನಾಳೆ ಅಹೋರಾತ್ರಿ ಧರಣಿ : ಎ.5ಕ್ಕೆ ಜಿಲ್ಲೆ, ತಾಲೂಕುಗಳಲ್ಲಿ ಪ್ರತಿಭಟನೆ, ಎ.7ಕ್ಕೆ ಜನಾಕ್ರೋಶ ಯಾತ್ರೆ
ವಿಜಯೇಂದ್ರ
ಬೆಂಗಳೂರು : ಹಾಲು, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ನಾಳೆ(ಎ.2) ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಎ. 5ಕ್ಕೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಎ.7ಕ್ಕೆ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿದೆ.
ಮಂಗಳವಾರ ನಗರದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿದೆ. ಜತೆಗೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ನಾಳೆಯೇ ವಿಧಾನಸೌಧದ ಆವರಣದಲ್ಲಿನ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಎ.7ರಿಂದ ‘ಜನಾಕ್ರೋಶ ಯಾತ್ರೆ’: ಎ.7ರ ಮಧ್ಯಾಹ್ನ 3ಕ್ಕೆ ಮೈಸೂರಿನಿಂದ ಜನಜಾಗೃತಿ ಹೋರಾಟ ಆರಂಭವಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೋರಾಟಕ್ಕೆ ಚಾಲನೆ ಕೊಡಲಿದ್ದು, 7ಕ್ಕೆ ಮೈಸೂರು, ಚಾಮರಾಜನಗರ ಜಿಲ್ಲೆ, 8ರ ಬೆಳಗ್ಗೆ ಮಂಡ್ಯ, ಮಧ್ಯಾಹ್ನ ಹಾಸನದಲ್ಲಿ ಹೋರಾಟ ಇದೆ. 9ಕ್ಕೆ ಕೊಡಗು- ಮಂಗಳೂರಿನಲ್ಲಿ ಹೋರಾಟ, 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಮೊದಲ ಹಂತದ ಹೋರಾಟ ಇದೆ ಎಂದರು.
ಎ.13ರಿಂದ ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಎರಡನೇ ಹಂತದ ಹೋರಾಟ ಇರುತ್ತದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಇದು ಸಂಚರಿಸಲಿದೆ. ಪ್ರತಿ ಜಿಲ್ಲೆಯಲ್ಲಿ ನಗರದಲ್ಲಿ 2-3 ಕಿಮೀ ಪಾದಯಾತ್ರೆ, ಬಳಿಕ ಸಭೆ ನಡೆಯಲಿದೆ. ಪಕ್ಷದ ಶಾಸಕರು, ಪರಿಷತ್ ಸದಸ್ಯರು, ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.