"ಆರೆಸ್ಸೆಸ್‌ನವರಷ್ಟು ಭ್ರಷ್ಟರು ಯಾರೂ ಇಲ್ಲ"; ಬಿಜೆಪಿ ಶಾಸಕ ಸುರೇಶ್‌ ಗೌಡ ಹಳೇ ವಿಡಿಯೋ ಮತ್ತೆ ವೈರಲ್‌

Update: 2025-04-06 16:12 IST
"ಆರೆಸ್ಸೆಸ್‌ನವರಷ್ಟು ಭ್ರಷ್ಟರು ಯಾರೂ ಇಲ್ಲ"; ಬಿಜೆಪಿ ಶಾಸಕ ಸುರೇಶ್‌ ಗೌಡ ಹಳೇ ವಿಡಿಯೋ ಮತ್ತೆ ವೈರಲ್‌
  • whatsapp icon

ಬೆಂಗಳೂರು : ಬಿಜೆಪಿ ಶಾಸಕ ಸುರೇಶ್ ಗೌಡ ಅವರು "ಆರೆಸ್ಸೆಸ್‌ನವರಷ್ಟು ಭ್ರಷ್ಟರು ಯಾರೂ ಇಲ್ಲ. ಸುಮ್ ಸುಮ್ನೆ ದೇಶಪ್ರೇಮ ಎಂದು ಹೇಳ್ತಾರೆ" ಎಂದು ಹೇಳಿದ್ದಾರೆನ್ನಲಾದ ಹಳೇ ವಿಡಿಯೋವೊಂದು ಈಗ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದೆ.

ಈ ಕುರಿತ ವಿಡಿಯೋವನ್ನು ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, "ಇಡೀ ಜಗತ್ತಿನಲ್ಲೇ ಶ್ರೀಮಂತ ಸಂಘವಾಗಲು ಆರೆಸ್ಸೆಸ್‌ ತಾನು ಮಾಡುವ ಭ್ರಷ್ಟಾಚಾರಗಳಿಗೆ ಎಲ್ಲೇ ಇಲ್ಲ. ಬಿಜೆಪಿ ಪಕ್ಷದ ನಾಯಕರೇ ಸಂಘ ಪರಿವಾರದ ಅಸಲಿ ಮುಖವಾಡಗಳನ್ನು ಬಿಚ್ಚಿಡಬೇಕು. ಸತ್ಯ ಕಹಿ ಆಗಿರುತ್ತೆ, ಸ್ವಲ್ಪ ಅರಗಿಸಿಕೊಳ್ಳಬೇಕು. ಬಿಜೆಪಿ ಶಾಸಕ ಸುರೇಶ್‌ ಗೌಡ ಅವರು ಆರೆಸ್ಸೆಸ್‌ನ ಗುಪ್ತಸೂಚಿಗಳ ಬಗ್ಗೆ ಬಾಯ್ತಪ್ಪಿ ಆಡಿದ ಮಾತುಗಳಲ್ಲ, ಬಾಯ್ತೆರೆದು ಮಾತಾಡಿದ್ದಾರೆ. ಸಂಘ ಪರಿವಾರದ ಕರ್ಮಕಾಂಡದ ಯಶೋಗಾಥೆಯ ಬಗ್ಗೆ ಬಿಜೆಪಿ ಶಾಸಕ ಸುರೇಶ್‌ ಗೌಡ ಒಂದೊಂದು ಆಣಿಮುತ್ತುಗಳನ್ನು ಉದುರಿಸಿದ್ದಾರೆ. ಶೂದ್ರರು, ಹಿಂದುಳಿದವರು, ಶೋಷಿತ ಸಮುದಾಯದ ಬಿಜೆಪಿ ಪಕ್ಷದ್ದೇ ರಾಜಕೀಯ ನಾಯಕರನ್ನು ಬುಡಮೇಲು ಮಾಡಿದ ಕುತಂತ್ರಗಾರಿಕೆಯ ಪರಂಪರೆಯನ್ನು ಹಾಡಿ ಹೊಗಳಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ವೈರಲ್‌ ಆದ ಹಳೆಯ ವಿಡಿಯೋದಲ್ಲೇನಿದೆ? :

"ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಹೊಡೆದಿದ್ದು ಯಾಕೆ?, ರಾಜ್ಯದಲ್ಲಿ ಬಲಿಷ್ಠರಾದ ತಕ್ಷಣ ಹೈಕಮಾಂಡ್‌ಗೆ ಗೌರವ ಕೊಡಲ್ಲ ಎಂದು ಹೊಡದೇ ಹೊಡೀತಾರೆ. ಮತ್ತು ಕೆಳಗೆ ಹಾಕ್ತಾರೆ. ಅದು ಒಂದು ಸಾಮಾನ್ಯ ವಿದ್ಯಾಮಾನ. ನಾನು ಅಂತ ಮೇಲೆ ಹೋದರೆ ಯಾರನ್ನೂ ಬಿಡಲ್ಲ. ಅಂತಹ ಅಡ್ವಾಣಿಯವರನ್ನೇ ಅರೆಸ್ಸೆಸ್‌ನವರು ಕೆಳಗೆ ಹಾಕಿದರು. ಅರೆಸ್ಸೆಸ್‌ನವರಷ್ಟು ಭ್ರಷ್ಟರು ಯಾರೂ ಇಲ್ಲ. ಕೇವಲ ಮಾತಿಗೆ ದೇಶಪ್ರೇಮ ಎಂದು ಹೇಳ್ತಾರೆ. ರಾಜ್ಯದಲ್ಲಿರುವ ಆರೆಸ್ಸೆಸ್‌ನವರ ಪಟ್ಟಿ ತೆಗೆದುಕೊಳ್ಳಿ. ಯಾರ್ಯಾರು ಎಷ್ಟೆಷ್ಟು ದುಡ್ಡು ಮಾಡಿದ್ದಾರೆ ಅಂತ. ಬೇಕಾದ್ರೆ ಯಡಿಯೂರಪ್ಪ ಅವರೇ ಪಟ್ಟಿ ಕೊಡ್ತಾರೆ. ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟೆ ಎಂದು ಅವರೇ ಹೇಳುತ್ತಾರೆ" ಎಂದು ಹೇಳಿರುವುದು ವೀಡಿಯೋದಲ್ಲಿದೆ.

ಈ ವಿಡಿಯೋ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದ್ದು ಎಂದು ಹೇಳಲಾಗುತ್ತಿದ್ದು, ರಹಸ್ಯ ಸಭೆಯೊಂದರಲ್ಲಿ ಸುರೇಶ್ ಗೌಡ ಮಾತನಾಡಿದ್ದನ್ನು ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಇದೀಗ ಮತ್ತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News