ಮೆಟ್ರೋ ದರ ಏರಿಕೆ | ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದ ಕಾಂಗ್ರೆಸ್ ಸರಕಾರ : ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಬೆಂಗಳೂರು ಮೆಟ್ರೋ ದರವನ್ನು ಏಕಾಏಕಿ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರರುವ ಅವರು, ಸಿಎಂ ಸಿದ್ದರಾಮಯ್ಯ ನವರೇ, ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ. ಈ ಕೊಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಎಂದು ಆರ್.ಅಶೋಕ್ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.