ಮಹಾಕುಂಭ ಮೇಳದ ಚಿತ್ರದ ಜೊತೆ ಗಣೇಶ, ಕಾರ್ತಿಕೇಯರ ನೀತಿಕಥೆ ಹಂಚಿಕೊಂಡ ನಟ ಕಿಶೋರ್ ಕುಮಾರ್

Update: 2025-03-03 20:08 IST
ಮಹಾಕುಂಭ ಮೇಳದ ಚಿತ್ರದ ಜೊತೆ ಗಣೇಶ, ಕಾರ್ತಿಕೇಯರ ನೀತಿಕಥೆ ಹಂಚಿಕೊಂಡ ನಟ ಕಿಶೋರ್ ಕುಮಾರ್
  • whatsapp icon

ಬೆಂಗಳೂರು : ಇತ್ತೀಚಿಗೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮುಕ್ತಾಯವಾದ ಮಹಾಕುಂಭ ಮೇಳದ ಸ್ನಾನದ ಪ್ರದೇಶದ ಚಿತ್ರವನ್ನು ಹಂಚಿಕೊಂಡಿರುವ ಬಹುಭಾಷಾ ನಟ ಕಿಶೋರ್ ಕುಮಾರ್, ಅದರ ಜೊತೆಗೆ ತಾವು ಬಾಲ್ಯದಲ್ಲಿ ಕೇಳಿದ್ದ ಗಣೇಶ, ಕಾರ್ತಿಕೇಯರ ನೀತಿಕಥೆಯನ್ನೂ ಬರೆದಿದ್ದಾರೆ.

ಕಿಶೋರ್‌ ಹಂಚಿಕೊಂಡಿರುವ ಚಿತ್ರದಲ್ಲಿ ಮಹಾಕುಂಭಮೇಳದಲ್ಲಿ ಭಕ್ತರು ಸ್ನಾನ ಮಾಡಲು ಇರುವ ಪ್ರದೇಶಗಳ ʼಹಂಚಿಕೆʼಯನ್ನು ಪಟ್ಟಿಮಾಡಲಾಗಿದೆ. ಒಂದು ಪ್ರದೇಶದಲ್ಲಿ ವಿವಿಐಪಿಗಳಿಗೆ, ಇನ್ನೊಂದು ಪ್ರದೇಶದಲ್ಲಿ ಸಾಮಾನ್ಯ ಜನರಿಗೆ ಮೀಸಲಾಗಿರುವ ಪ್ರದೇಶ ಎಂದು ಉಲ್ಲೇಖಿಸಲಾಗಿದೆ.

ಇದರೊಂದಿಗೆ ಕಿಶೋರ್‌ ಅವರು ತಮ್ಮ ಬಾಲ್ಯದ ಕಥೆಯನ್ನೂ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್‌ ಹೀಗಿದೆ,

“ನನ್ನ ಬಾಲ್ಯದ ಒಂದು ನೀತಿ ಕಥೆ - ಶಿವ ಮತ್ತು ಪಾರ್ವತಿಯರ ಬಳಿ ತಮ್ಮ ಮಕ್ಕಳಿಗೆ ಕೊಡಲು ನಾರದ ತಂದುಕೊಟ್ಟ ಒಂದೇ ಒಂದು ಮಾವಿನ ಹಣ್ಣಿತ್ತು. ಆ ಮಾವಿನ ಹಣ್ಣನ್ನು ಗೆಲ್ಲಲು ಅವರು , ತಮ್ಮ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮೂರು ಬಾರಿ ಪ್ರಪಂಚ ಸುತ್ತಿ ಬರುವಂತೆ ಸವಾಲು ಹಾಕಿದರು. ಯಾರು ಮೊದಲು ಹಿಂತಿರುಗುತ್ತಾರೋ, ಅವರಿಗೆ ಮಾವಿನ ಹಣ್ಣು ಸಿಗುತ್ತದೆ. ಕಾರ್ತಿಕೇಯ ಒಡನೇ ತನ್ನ ವಾಹನವಾದ ನವಿಲಿನ ಮೇಲೆ ಹಾರಿ ಹೊರಟನು, ಆದರೆ ಗಣೇಶನು ತನ್ನ ಹೆತ್ತವರನ್ನು ಸುತ್ತಿ ನೀವೇ ನನ್ನ ಪ್ರಪಂಚ ಎಂದು ಹೇಳಿದ. ಕಾರ್ತಿಕೇಯ, ಪ್ರಪಂಚವನ್ನು ಮೂರು ಸುತ್ತು ಸುತ್ತಿ ಹಿಂತಿರುಗಿದ ನಂತರ ಕಂಡದ್ದು ಶಾಶ್ವತ ಸತ್ಯವನ್ನು.”

“ಪ್ರೀತಿಯೇ ದೇವರು ಪ್ರಪಂಚ ಎಲ್ಲ .. ಅದು ನೀವು ಎಲ್ಲಿದ್ದೀರೋ ಅಲ್ಲೇ ಇದೆ ... ನಿಮ್ಮ ಪ್ರೀತಿಪಾತ್ರರ ನಡುವೆ. ಅವರನ್ನು ಸಂತೋಷವಾಗಿಡುವುದೇ ಪೂಜೆ.. “

“ಈಗ ನನಗೆ ಯಾರು ಆದರ್ಶ ? ಗಣೇಶನೇ ? ಕಾರ್ತಿಕೇಯನೇ? ನನ್ನ ಸುತ್ತಿ ಹೆತ್ತವರು, ಹಿತವರಿರುವಾಗ.., ಆಗಸದಿಂದ ನನ್ನ ತಲೆಯ ಮೇಲೆ ಬೀಳುವ ಒಂದೊಂದು ಹನಿಯೂ ಗಂಗೆ ಕಾವೇರಿಯಾಗಿರುವಾಗ, ಪ್ರತಿ ಮಳೆಯೂ ಪುಣ್ಯಸ್ನಾನ, ನಾನಡಿಯಿಡುವ ಪ್ರತಿ ನೆಲವೂ ಪುಣ್ಯಕ್ಷೇತ್ರವಾಗಿರುವಾಗ, ನನಗೇಕೆ ತಾರತಮ್ಯ ಮಾಡುವ, ಜೀವಕ್ಕೆ ಬೆಲೆಕೊಡದ, ಕೇವಲ ರಾಜಕೀಯಕ್ಕಾಗಿ ಮಾಡುವ ತೀರ್ಥ ಸ್ನಾನಗಳ ಮೇಳಗಳ ಹಂಗು ? ಇದನ್ನೇ ಅಲ್ಲವೇ ಗಣೇಶ ನನಗೆ ಹೇಳಿಕೊಟ್ಟಿದ್ದು??” ಎಂದು ಅವರು ಪೋಸ್ಟ್‌ ನಲ್ಲಿ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News