ಬಿಜೆಪಿ ನಾಯಕರೇ, ಜನಾಕ್ರೋಶಯಾತ್ರೆಯನ್ನು ಯಾರ ವಿರುದ್ಧ ಮಾಡುತ್ತಿದ್ದೀರಿ? : ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ
ಬೆಂಗಳೂರು: ‘ರಾಜ್ಯ ಬಿಜೆಪಿ ನಾಯಕರೇ, ಜನಾಕ್ರೋಶಯಾತ್ರೆಯನ್ನು ಯಾರ ವಿರುದ್ಧ ಮಾಡುತ್ತಿದ್ದೀರಿ?’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಅಂತರ ರಾಷ್ಟ್ರೀಯ ಮಟ್ಟದಲ್ಲಿ ತೈಲದ ಡಾಲರ್ ಬೆಲೆ ಭಾರಿ ಕುಸಿತ ಕಂಡಿದ್ದರೂ ಅಡುಗೆ ಅನಿಲ 50 ರೂ., ಪೆಟ್ರೋಲ್, ಡೀಸೆಲ್ ಬೆಲೆ ಸಹ ಹೆಚ್ಚಳವಾಗಿದೆ. ಕೇಂದ್ರ ಸರಕಾರ ಕಚ್ಚಾ ತೈಲ ಬೆಲೆಯನ್ನು ಭಾರಿ ಕಮ್ಮಿ ಬೆಲೆಗೆ ಖರೀದಿಸುತ್ತಿದ್ದು ಅದರ ಲಾಭವನ್ನು ನೇರವಾಗಿ ಗ್ರಾಹಕರಿಗೆ ನೀಡಬೇಕಾಗಿತ್ತು’ ಎಂದು ತಿಳಿಸಿದ್ದಾರೆ.
ಆದರೆ ಕೇಂದ್ರ ಬಿಜೆಪಿ ಸರಕಾರ ಅಬಕಾರಿ ಸುಂಕವನ್ನು 2 ರೂ.ಗಳನ್ನು ಜಾಸ್ತಿ ಮಾಡಿ ಅದರ ಲಾಭವನ್ನು ಸರಕಾರಕ್ಕೆ ಪಡೆದುಕೊಳ್ಳುತ್ತಿದೆ. ಇದು ಯಾರ ತೃಷ್ಟೀಕರಣಕ್ಕೆ?. ಇದನ್ನು ನೋಡಿದರೆ ಕೇಂದ್ರ ಸರಕಾರ ದೇಶದ ಜನರಿಗೆ ಮೋಸ ಮಾಡುತ್ತಿದೆ ಎಂಬುದು ಸ್ಪಷ್ಟ. ಈ ಎಲ್ಲ ಬೆಲೆ ಏರಿಕೆ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಮುಂದುವರಿಸಬೇಕಾಗಿದ್ದು ನಿಮ್ಮ ಕೇಂದ್ರದ ನಾಯಕರ ವಿರುದ್ಧ ವಿಶೇಷ ಪ್ರತಿಭಟನೆ ಮಾಡ್ತೀರಾ?’ ಎಂದು ರಾಮಲಿಂಗಾರೆಡ್ಡಿ ಕೇಳಿದ್ದಾರೆ.