ಒಕ್ಕಲಿಗ ಅಸ್ತ್ರ ಬಳಸಿರುವ ಸದಾನಂದ ಗೌಡ ಬಣ, ವಿಪಕ್ಷ ನಾಯಕ ಅಶೋಕ್ ಬುಡಕ್ಕೆ ಬೆಂಕಿ ಕಾಯಿಸುತ್ತಿದೆ‌ : ದಿನೇಶ್ ಗುಂಡೂರಾವ್ ವ್ಯಂಗ್ಯ

Update: 2025-01-23 22:48 IST
ಒಕ್ಕಲಿಗ ಅಸ್ತ್ರ ಬಳಸಿರುವ ಸದಾನಂದ ಗೌಡ ಬಣ,   ವಿಪಕ್ಷ ನಾಯಕ ಅಶೋಕ್ ಬುಡಕ್ಕೆ ಬೆಂಕಿ ಕಾಯಿಸುತ್ತಿದೆ‌ : ದಿನೇಶ್ ಗುಂಡೂರಾವ್ ವ್ಯಂಗ್ಯ
  • whatsapp icon

ಬೆಂಗಳೂರು, ಜ.23: ದಿನ ಬೆಳಗಾದರೆ ಸಾಕು ಯತ್ನಾಳ್, ಅವರದ್ದೇ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅವರ ತಂದೆ ಯಡಿಯೂರಪ್ಪರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ ಓಡಾಡುತ್ತಿದ್ದಾರೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಯುದ್ಧವೇ ನಡೆಯುತ್ತಿದೆ. ಒಕ್ಕಲಿಗ ಅಸ್ತ್ರ ಬಳಸಿರುವ ಸದಾನಂದ ಗೌಡ ಬಣ, ವಿಪಕ್ಷ ನಾಯಕ ಅಶೋಕ್ ಬುಡಕ್ಕೆ ಕಾಯಿಸುತ್ತಿದೆ‌. ಇದು ರಾಜ್ಯ ಬಿಜೆಪಿಯ ಸದ್ಯದ ಸ್ಥಿತಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಗುರುವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಯ ಮನೆಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಿರುವ ಮನೆಯ ಗಳವನ್ನು ಸ್ವತಃ ಬಿಜೆಪಿ ನಾಯಕರೇ ಇರಿಯುತ್ತಿದ್ದಾರೆ. ಹೀಗಿದ್ದರೂ ವಿಪಕ್ಷ ನಾಯಕ ಅಶೋಕ್ ರವರಿಗೆ ತಮ್ಮ ಪಕ್ಷದ ಬಣ ಬಡಿದಾಟದ ಬಗ್ಗೆ ಚಿಂತೆಯೇ ಇಲ್ಲ ಎಂದು ಟೀಕಿಸಿದ್ದಾರೆ.

ಆದರೆ ಅವರು ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆಯೆ ಹಗಲಿರುಳು ತಲೆ ಕೆಡಿಸಿಕೊಂಡು ಕುಳಿತಿರುತ್ತಾರೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೊಣದ ಬಗ್ಗೆ ಚಿಂತೆ ಮಾಡಿದರು ಎಂಬುವುದು ಇದಕ್ಕೇ ಅಲ್ಲವೆ.? ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಣ ರಾಜಕೀಯದಿಂದ ಬೇಯುತ್ತಿರುವ ರಾಜ್ಯ ಬಿಜೆಪಿಯಲ್ಲಿ ಬೆನ್ನಿಗೆ ಚೂರಿ ಹಾಕಲು ಅವರವರೆ ಚಾಕು-ಬಾಕು ಹಿಡಿದು ನಿಂತಿದ್ದಾರೆ. ರಾಜ್ಯ ಬಿಜೆಪಿಯ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಒಡೆಯಲು ಈಗ ಅನ್ಯರೆ ಬೇಕಾಗಿಲ್ಲ. ಬಿಜೆಪಿ ನಾಯಕರೆ ಕೊನೆಯ ಮೊಳೆ ಒಡೆಯಲಿದ್ದಾರೆ. ಇನ್ನಾದರೂ ಅಶೋಕ್ ನಮ್ಮ ಪಕ್ಷದ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಸಮಾಧಿ ಸ್ಥಿತಿಯಲ್ಲಿರುವ ಅವರ ಪಕ್ಷವನ್ನು ಉಳಿಸಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News