ಗಣತಿ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತೀರಿ : ಸಿಎಂಗೆ ಕುಮಾರಸ್ವಾಮಿ ಎಚ್ಚರಿಕೆ

Update: 2025-04-16 17:06 IST
Photo of  HD Kumaraswamy,

ಎಚ್.ಡಿ.ಕುಮಾರಸ್ವಾಮಿ

  • whatsapp icon

ಬೆಂಗಳೂರು : ‘ನೆಮ್ಮದಿಯಾಗಿದ್ದ ಕರ್ನಾಟಕ ರಾಜ್ಯವನ್ನು ಕೆಣಕಿದ್ದೀರಿ. ಜಾತಿಗಣತಿ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತೀರಿ. ಜನರಿಗೆ ನಿಮ್ಮ ಅಸಲಿಯೆತ್ತು ಗೊತ್ತಾಗಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಅಕ್ರಮಬದ್ಧ ಜಾತಿಗಣತಿ ಬಗ್ಗೆ ಜನರ ಆಕ್ರೋಶ ಸರಿ ಇದೆ. ಸುಳ್ಳುಲೆಕ್ಕ ಗೊತ್ತಿದೆ. ಕಳ್ಳಬೆಕ್ಕು ಕಣ್ಮುಚ್ಚಿ, ಕದ್ದು ಹಾಲು ಕುಡಿದರೆ ಲೋಕಕ್ಕೆ ಕಾಣದೇ?. ಗಣತಿ ಹೆಸರಿನಲ್ಲಿ ಜನರನ್ನು ಛಿದ್ರಗೊಳಿಸಿ ರಾಜ್ಯದ ನೆಮ್ಮದಿಗೆ ಕೊಳ್ಳಿಯಿಟ್ಟು ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್‍ನ ಹಿಡೆನ್ ಅಜೆಂಡಾ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಗಣತಿಯನ್ನೇ ಗುರಾಣಿ ಮಾಡಿಕೊಂಡಿದೆ’ ಎಂದು ಲೇವಡಿ ಮಾಡಿದ್ದಾರೆ.

‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ?’ ಹೀಗೆಂದರೇನು ಮುಖ್ಯಮಂತ್ರಿಗಳೇ? ಕನಕದಾಸರ ಆಶಯ ಅರ್ಥಪೂರ್ಣ. ನಿಮ್ಮ ಪ್ರಾಯೋಜಿತ ಗಣತಿ ವರದಿಯ ದುರಾಶಯ ಪ್ರಶ್ನಾರ್ಹ. ಹೇಳುವುದು ಒಂದು, ಮಾಡಿದ್ದು ಇನ್ನೊಂದು. ‘ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ..’ ಎಲ್ಲರನ್ನೂ ಒಳಗೊಳ್ಳುವ ಬಸವಣ್ಣರ ವಚನವನ್ನು ಬರೆದುಕೊಂದ್ದೀರಿ. ʼಇವರು ನಮ್ಮವರಲ್ಲ, ಇವ ನಮ್ಮನಲ್ಲ..’ ಎಂದು ಕೃತಿಯಲ್ಲಿಯೇ ತೋರುತ್ತೀರಿ! ಬೂಟಾಟಿಕೆಗೂ ಇತಿಮಿತಿ ಬೇಡವೇ ಸಿದ್ದರಾಮಣ್ಣ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸಾಮಾಜಿಕ ನ್ಯಾಯ ಎಂದರೆ ನಿಮಗೆ ಬೇಡವಾದ ಸಮಾಜಗಳ ತುಚ್ಛೀಕರಣ. ಸಾಮಾಜಿಕ ನ್ಯಾಯವೆಂದರೆ ಒಂದು ನಿರ್ದಿಷ್ಟ ಸಮಾಜದ ತುಷ್ಠೀಕರಣ. ಜಾತಿ ಸಮೀಕರಣವಲ್ಲ, ರಾಜಕೀಯ ಲಾಭಕ್ಕೆ ಜಾತಿಗಳ ಏಕೀಕರಣಕ್ಕೆ ಕೈಹಾಕಿದ್ದೀರಿ. ಗಣತಿಯ ಲಾಭ ನಿಮಗೋ? ನಿಮಗೆ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೋ?

ನಿಮ್ಮ ಒಳಮರ್ಮ ರಾಹುಲ್ ಗಾಂಧಿ ಅರ್ಥವಾದಂತೆ ಇಲ್ಲ, ಪಾಪ. ಹಿಂದೆ ವೀರೇಂದ್ರ ಪಾಟೀಲ್‍ಗೆ ಎಸಗಿದ ಅನ್ಯಾಯಕ್ಕೆ ನಿಮ್ಮ ಪಕ್ಷ ಬೆಲೆ ತೆತ್ತಿದೆ, ನೆನಪಿಲ್ಲವೇ? ನೀವೂ, ನಿಮ್ಮ ಪಕ್ಷ ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ತಪ್ಪು ತಿದ್ದಿ ನಡೆಯುವ ಗುಣಲಕ್ಷಣ ನಿಮಗೂ ಇಲ್ಲ, ನಿಮ್ಮ ಪಕ್ಷಕ್ಕೂ ಇಲ್ಲ’ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News