ಡೀಸೆಲ್ ದರ ಏರಿಕೆ: ಎ.14ರ ಮಧ್ಯರಾತ್ರಿಯಿಂದಲೇ ಲಾರಿ ಮಾಲಕರ ಅನಿರ್ದಿಷ್ಟಾವಧಿ ಮುಷ್ಕರ
ಸಾಂದರ್ಭಿಕ ಚಿತ್ರ
ಬೆಂಗಳೂರು : ಡೀಸೆಲ್ ದರ ಏರಿಕೆ ಖಂಡಿಸಿ ಲಾರಿ ಮಾಲಕರ ಸಂಘ ರಾಜ್ಯ ಸರಕಾರದ ವಿರುದ್ಧ ಎಪ್ರಿಲ್ 14ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ಮುಂದಾಗಿದೆ.
ಈ ಸಂಬಂಧ ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮಾಲಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎರಡನೇ ಬಾರಿ ಡೀಸೆಲ್ ದರ ಹೆಚ್ಚಳ ಮಾಡಿದೆ. ಕಳೆದ ಹಿಂದಿನ ವರ್ಷ ಜೂನ್‍ನಲ್ಲಿ ಮೂರು ರೂ. ಈ ವರ್ಷ ಎಪ್ರಿಲ್‍ನಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಲಾರಿ ಮಾಲಕರು ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಈ ಡೀಸೆಲ್ ದರವನ್ನು ಇಳಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿದ್ದೇವೆ ಎಂದರು.
ನಮ್ಮ ಹೋರಾಟ ಶುರುವಾದ ಬಳಿಕ ಯಾವುದೇ ರಾಜ್ಯದಿಂದ ಕರ್ನಾಟಕದೊಳಗೆ ವಾಣಿಜ್ಯ ವಾಹನ ಸಂಚಾರ ಮಾಡುವುದಿಲ್ಲ. ಚೆಕ್ ಪೋಸ್ಟ್‌ಗಳಲ್ಲಿ ವಾಣಿಜ್ಯ ವಾಹನಗಳನ್ನು ಒಳಗಡೆ ಬಿಡದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಲಾರಿಗಳನ್ನು ಟೋಲ್ ಮತ್ತು ಹೈವೇಗಳಲ್ಲಿ ಬಿಟ್ಟು ಮುಷ್ಕರ ಮಾಡುತ್ತೇವೆ. ಮುಷ್ಕರಕ್ಕೆ ಏರ್ ಪೋರ್ಟ್ ಟ್ಯಾಕ್ಸಿ ಸಂಘ ಮತ್ತು ಪೆಟ್ರೋಲ್-ಡೀಸೆಲ್ ಬಂಕ್ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಜಿ.ಆರ್.ಷಣ್ಮುಗಪ್ಪ ತಿಳಿಸಿದರು.
ಮುಷ್ಕರದ ದಿನ ಏರ್ ಪೋರ್ಟ್ ಟ್ಯಾಕ್ಸಿ, ಜಲ್ಲಿ ಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ ಸುಮಾರು ಆರು ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ ಅಕ್ಕಿ ಲೋಡ್, ಗೂಡ್ಸ್, ಪೆಟ್ರೋಲ್, ಡೀಸೆಲ್ ಸಾಗಾಟದ ಲಾರಿಗಳನ್ನೂ ಬಂದ್ ಮಾಡಲಾಗುತ್ತದೆ. ಇದಕ್ಕೆ ಚಾಲಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳು ಸೇರಿ ಸುಮಾರು 9 ಲಕ್ಷ ವಾಹನಗಳ ಸಂಚಾರ ಸ್ಥಗಿತವಾಗಲಿದೆ ಎಂದು ಜಿ.ಆರ್.ಷಣ್ಮುಗಪ್ಪ ವಿವರಿಸಿದರು.
ಬೇಡಿಕೆಗಳು..!
1. ಡೀಸೆಲ್ ದರ ಇಳಿಸುವುದು.
2. ಟೋಲ್ ದರ ಕಡಿಮೆ ಮಾಡುವುದು.
3. ಬಾರ್ಡರ್ ಚೆಕ್ ಪೋಸ್ಟ್ ತೆರವುಗೊಳಿಸುವುದು.
4. ಎಫ್‍ಸಿ ಶುಲ್ಕ ಇಳಿಕೆ ಮಾಡುವುದು.
ಏನಿರಲ್ಲ?
1. ಏರ್ ಪೋರ್ಟ್ ಟ್ಯಾಕ್ಸಿ ಬಂದ್
2. ಜಲ್ಲಿ ಕಲ್ಲು, ಮರಳು ಲಾರಿ ಬಂದ್
3. ಗೂಡ್ಸ್ ವಾಹನಗಳು ಬಂದ್
4. ಸುಮಾರು ಐದಾರು ಲಕ್ಷ ಲಾರಿಗಳ ಬಂದ್
5. ಅಕ್ಕಿ ಲೋಡ್, ಗೂಡ್ಸ್, ಪೆಟ್ರೋಲ್, ಡಿಸೇಲ್ ಲಾರಿ ಬಂದ್
6 ಹೊರ ರಾಜ್ಯದಿಂದಲೂ ವಾಹನ ಬರುವುದಿಲ್ಲ.