‘ಮೇಕೆದಾಟು’ ರಾಜ್ಯ ಸರಕಾರ ರಾಜಕೀಯ ಇಚ್ಛಾಶಕ್ತಿ ತೋರಿಸಲಿ : ಬೊಮ್ಮಾಯಿ

Update: 2025-04-06 17:45 IST
‘ಮೇಕೆದಾಟು’ ರಾಜ್ಯ ಸರಕಾರ ರಾಜಕೀಯ ಇಚ್ಛಾಶಕ್ತಿ ತೋರಿಸಲಿ : ಬೊಮ್ಮಾಯಿ
  • whatsapp icon

ಹಾವೇರಿ: ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ್ದರು. ಈಗ ಅವರ ಮಿತ್ರ ಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಅವರ ಜೊತೆಗೆ ಐದು ನಿಮಿಷ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಅಂತಹ ರಾಜಕೀಯ ಇಚ್ಛಾಶಕ್ತಿಯನ್ನು ರಾಜ್ಯ ಕಾಂಗ್ರೆಸ್ ಸರಕಾರ ತೋರಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ರವಿವಾರ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರಕಾರ ಈಗಾಗಲೇ ಡಿಪಿಆರ್‍ಗೆ ಒಪ್ಪಿಗೆ ಕೊಟ್ಟಿದೆ. ಪರಿಸರ ಇಲಾಖೆಯ ಅನುಮತಿ ಅತಿ ಶೀಘ್ರವೇ ಸಿಗಲಿದೆ. ಎತ್ತಿನ ಹೊಳೆ ಯೋಜನೆಗೆ ಕೇಂದ್ರದ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಹೇಳಿದರು.

ಎ.10ಕ್ಕೆ ಧರಣಿ: ರಾಜ್ಯ ಸರಕಾರದ ಬೆಲೆ ಏರಿಕೆ, ಜನ ವಿರೋದಿ ನೀತಿ ವಿರುದ್ಧ ಎಪ್ರಿಲ್ 10 ರಂದು ಬಿಜೆಪಿ ಹಗಲು ರಾತ್ರಿ ಧರಣಿ ನಡೆಸಲಿದೆ. ಬಿಜೆಪಿ ಸಂಸ್ಥಾಪನೆಯಾಗಿ 45 ವರ್ಷಗಳಾಗಿವೆ. ನಮ್ಮ ಹಿರಿಯರು ಕಟ್ಟಿರುವ ಪಕ್ಷವನ್ನು ಆ ಧೈಯ ಉದ್ದೇಶ ಆದರ್ಶಗಳಿಗೆ ಅನುಗುಣವಾಗಿ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಿ ನಾವು ಇಂದು ಆಚರಣೆ ಮಾಡಿದ್ದೇವೆ. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಬಂದಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ವಕ್ಫ್ ಕಾಯ್ದೆ ಜಾರಿ ಕುರಿತು ಕೇಳಿದ ಪಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದಲ್ಲಿ ರೂಲ್ ಆಫ್ ಲಾ ಸ್ಥಾಪನೆ ಆಗಬೇಕು. ವಕ್ಫ್ ಹೆಸರಿನಲ್ಲಿ ದೇವಸ್ಥಾನ, ಸರಕಾರಿ ಕಚೇರಿಗಳು, ಸಂಸತ್ ಭವನ ವಕ್ಫ್ ಆಸ್ತಿ ಎಂದು ಹೇಳಿದ್ದಾರೆ. ಅವೆಲ್ಲಕ್ಕೂ ತೆರೆ ಬೀಳಲಿದೆ. ಹಲವಾರು ರೈತರಿಗೆ, ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ಅವರು ಸಿವಿಲ್ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ. ಅದಕ್ಕೆ ಕಾನೂನು ಪುನರ್ ಸ್ಥಾಪನೆಯಾಗಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News