ರಟ್ಟಿಹಳ್ಳಿ : ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ರಟ್ಟಿಹಳ್ಳಿ: "ಧರ್ಮವು ಸಮಾಜ ಕಟ್ಟುವಂತಹ ಕೆಲಸಕ್ಕೆ ಪ್ರೇರಣೆ ನೀಡಿದರೆ ಅಧರ್ಮವು ಸಮಾಜವನ್ನು ಒಡೆಯುವಂತಹ ಕಾರ್ಯಕ್ಕೆ ಪ್ರೇರಣೆ ನೀಡುತ್ತದೆ, ಆದ್ದರಿಂದ ನಾವೆಲ್ಲರೂ ಸಮಾಜ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಅದುವೇ ನಿಜವಾದ ಧರ್ಮ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಅವರು ಸ್ಥಳೀಯ ಇಸ್ಲಾಮಿಕ್ ಸೆಂಟರ್ ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಟ್ಟಿಹಳ್ಳಿ ವತಿಯಿಂದ ಹಮ್ಮಿಕೊಂಡಂತಹ ಸೌಹಾರ್ದ ಇಫ್ತಾರ್ ಕೂಟವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಟ್ಟಿಹಳ್ಳಿ ಪಿಎಸ್ಐ ಕೃಷ್ಣಪ್ಪ ತೋಪಿನ ಅವರು ಮಾತನಾಡಿ, " ಜನರು ಒಳ್ಳೆಯವರಾದರೆ ಸಮಾಜವು ಒಳ್ಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಧರ್ಮಗಳ ಸಂದೇಶಗಳನ್ನು ತಿಳಿಯಲು ನಾವೆಲ್ಲರೂ ಪ್ರಯತ್ನಿಸಬೇಕು, ಇಂತಹ ಸೌಹಾರ್ದ ಸಭೆಗಳು ಸಮಾಜಕ್ಕೆ ಮಾದರಿಯಾಗಲಿ" ಎಂದು ಹೇಳಿದರು.
ಹಾವೇರಿ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕ ಕಾಂತೇಶ್ ಅಂಬಿಗೇರ ಮಾತನಾಡಿ, " ನಮ್ಮ ಹಿರಿಯರು ಯಾವುದೇ ಧರ್ಮದವರಾಗಿರಲಿ ಪರಸ್ಪರ ಕೂಡಿ ಬಾಳುತ್ತಿದ್ದರು. ಆದರೆ ಇಂದು ಕೆಲವರು ನಮ್ಮನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ದ್ವೇಷಿಸುವವರು ಕಟ್ಟಕಡೆಗೆ ಸೋಲನ್ನು ಅನುಭವಿಸುತ್ತಾರೆ. ನಾವೆಲ್ಲರೂ ಪರಸ್ಪರ ಪ್ರೀತಿಸುವವರಾಗಬೇಕು" ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಳೀಯ ಅಧ್ಯಕ್ಷ ಜಾವೀದ್ ಗುಡಿಹಾಳ, ಮುಖಂಡರಾದ ಬಸವನ ಗೌಡ ಗಂಗಪ್ಪನವರ್, ಲೈನ್ಸ್ ಕ್ಲಬ್ ಇದರ ಅಧ್ಯಕ್ಷ ಸಂದೀಪ್ ಪಾಟೀಲ್ ಮುಂತಾದರು ಉಪಸ್ಥಿತರಿದ್ದರು.



