2028ರಲ್ಲಿ ಗೋರಕ್ಷೆ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತೇವೆ: ಬಸನಗೌಡ ಪಾಟೀಲ್ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಹಾವೇರಿ: ನಾನು, ಕಾಂತೇಶ್, ಈಶ್ವರಪ್ಪ ಯಾವತ್ತೂ ಹಿಂದುತ್ವದ ವಿಚಾರದಲ್ಲಿ ರಾಜಿಯಾಗಿಲ್ಲ. 2028ರಲ್ಲಿ ಗೋರಕ್ಷೆ ಹಾಗೂ ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬುಧವಾರ ಹಾವೇರಿಯಲ್ಲಿ ಕ್ರಾಂತಿವೀರ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ‘ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಅನ್ಯಾಯದ ವಿರುದ್ಧ ನ್ಯಾಯ ಜಾಥಾ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದುತ್ವ ಉಳಿದರೆ ನಾವು ಉಳಿಯುತ್ತೇವೆ. ಹಿಂದುತ್ವಕ್ಕೆ ಅಪಮಾನ ಮಾಡಿದವರು ಹಿಂದೂ ಅಲ್ಲ, ಆತ ಹಿಂದೂಗೆ ಹುಟ್ಟಿಲ್ಲ. ಆತ ಪಾಕಿಸ್ತಾನಕ್ಕೆ ಹುಟ್ಟಿರಬಹುದು. ಆತ ಯಾವುದೆ ಪಕ್ಷದಲ್ಲಿರಲಿ. ಡಿಜಿಪಿಗೆ ಹೇಳುತ್ತೇನೆ. ʼಯಾವನೇ ಮಗ ಪಾಕಿಸ್ತಾನ ಜಿಂದಾಬಾದ್ʼ ಎಂದರೆ ಅಲ್ಲಿಯೇ ಹೊಡೆಯಿರಿ, ದೂರು, ಎಫ್‍ಐಆರ್ ಏನು ಇಲ್ಲ ಎಂದು ಅವರು ಹೇಳಿದರು.
ಪೊಲೀಸ್ ನೇಮಕಾತಿ, ಕೆಪಿಎಸ್ಸಿ ನೇಮಕಾತಿಗಳಲ್ಲಿ ಏನಾಗುತ್ತಿದೆ. ಕನ್ನಡ ಕಲಿತವರಿಗೆ ಕೆಪಿಎಸ್ಸಿ ಮೂಲಕ ತಹಶೀಲ್ದಾರ್, ಸಹಾಯಕ ಆಯುಕ್ತರಾಗಲು ಸಾಧ್ಯವಾಗುತ್ತಿಲ್ಲ. ಇಂಗ್ಲಿಷ್ ಭಾಷೆಯಿಂದ ಕನ್ನಡ ಭಾಷೆಗೆ ತರ್ಜುಮೆಗೊಂಡ ಪ್ರಶ್ನೆ ಪತ್ರಿಕೆಗಳಲ್ಲಿ ಹಲವಾರು ಲೋಪಗಳು ಕಂಡು ಬರುತ್ತಿದೆ. ನಮ್ಮ ಬಡ ಕುಟುಂಬಗಳ ಹುಡುಗರು ಪರೀಕ್ಷೆಯಲ್ಲಿ ಆಯ್ಕೆಯಾಗಲು ಸಾಧ್ಯವಾಗದಂತೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಯತ್ನಾಳ್ ದೂರಿದರು.
ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಸದಸ್ಯ ಆಗಲು 5 ರಿಂದ 10 ಕೋಟಿ ರೂ., ಕೆಪಿಎಸ್ಸಿ ಅಧ್ಯಕ್ಷ ಆಗಲು 50 ಕೋಟಿ ರೂ., ಸಹಾಯಕ ಆಯುಕ್ತರಾಗಲು 2 ಕೋಟಿ ರೂ., ಡಿವೈಎಸ್ಸಿ ಆಗಲು 2 ಕೋಟಿ ರೂ., ಪಿಎಸ್ಸೈ ಆಗಲು 1 ಕೋಟಿ ರೂ. ನೀಡಬೇಕು. ಹೀಗಿರುವಾಗ ಅವರು ಭ್ರಷ್ಟಾಚಾರ ಮಾಡದೇ ಇನ್ನೇನು ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ಪೊಲೀಸ್ ಪದೇ 50 ರೂಪಾಯಿ ತಿಂದರೆ ಲೋಕಾಯುಕ್ತದವರು ದಾಳಿ ಮಾಡಿ ಹಿಡಿಯುತ್ತಾರೆ. ವಿಧಾನಸೌಧದಲ್ಲಿ ಕೂತು ಹಣ ಎಣಿಸುವವರಿಗೆ ಯಾಕೆ ಲೋಕಾಯುಕ್ತದವರು ದಾಳಿ ಮಾಡಿ ಹಿಡಿಯುವುದಿಲ್ಲ. ಎಲ್ಲವೂ ಹೊಂದಾಣಿಕೆ. ಬಡವರಿಗೆ ಸರಿಯಾಗಿ ನ್ಯಾಯ ಸಿಗುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು 1 ಲಕ್ಷ ಕೋಟಿ ರೂ.ಬೇಕು. ಅದನ್ನು ಮುಗಿಸಿದರೆ ನಮಗೆ ಈ ಸರಕಾರದ ಯಾವ ಗ್ಯಾರಂಟಿಗಳು ಬೇಕಾಗಿಲ್ಲ ಎಂದು ಯತ್ನಾಳ್ ಹೇಳಿದರು.