‘ಒಳ ಮೀಸಲಾತಿ’ ನ್ಯಾಯ ಸಿಗುವವರೆಗೂ ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿರಬೇಕು : ಕೆ.ಎಚ್.ಮುನಿಯಪ್ಪ

Update: 2025-04-06 18:38 IST
‘ಒಳ ಮೀಸಲಾತಿ’ ನ್ಯಾಯ ಸಿಗುವವರೆಗೂ ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿರಬೇಕು : ಕೆ.ಎಚ್.ಮುನಿಯಪ್ಪ
  • whatsapp icon

ವಿಜಯನಗರ : ಒಳ ಮೀಸಲಾತಿಯಡಿಯಲ್ಲಿ ಪರಿಶಿಷ್ಟ ಜಾತಿಯ ಎಡ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಲು ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ನಮಗೆ ನ್ಯಾಯ ಸಿಗುವವರೆಗೂ ಎಲ್ಲಾ ನಾಯಕರು ಪಕ್ಷಾತೀತವಾಗಿ ಒಟ್ಟಾಗಿರಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದರು.

ರವಿವಾರ ಹೊಸಪೇಟೆಯ ಎ.ಆರ್.ಎಸ್ ಹೋಮ್ ಸ್ಟೇ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಾದಾರಚನ್ನಯ್ಯ ಸೇವಾ ಸಮಿತಿಯ ದ್ವಿತೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ನಮ್ಮ ಸಮುದಾಯದ ನ್ಯಾಯಯುತ ಬೇಡಿಕೆಗಳ ಪರವಾಗಿ ನಾನು 1991 ರಿಂದ 7 ಬಾರಿ ಸಂಸದನಾಗಿ ಪ್ರಯತ್ನ ಪಟ್ಟಿದ್ದೇನೆ. ಪ್ರಧಾನಮಂತ್ರಿಗಳಾಗಿದ್ದ ಪಿವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್ ರವರಿಗೆ ನಮ್ಮ ಸಮುದಾಯದ ಎಲ್ಲಾ ಸಂಸದರೂ ಒಟ್ಟಾಗಿ ನಿಯೋಗವು ಹೋಗಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ನ್ಯಾಯಯುತವಾಗಿ ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನಗಳು ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಯಾವುದೇ ಪಕ್ಷವಿರಲಿ ನಾವು ಒಟ್ಟಾಗಿ ಹೋಗಬೇಕು. ಅಂದು ಕೇಂದ್ರದಲ್ಲಿ ನಮ್ಮ ಯುಪಿಎ ಸರಕಾರವಿದ್ದಾಗ ಆಂಧ್ರಪ್ರದೇಶದಲ್ಲಿ ಮೀಸಲಾತಿ ವರ್ಗೀಕರಣ ಮಾಡಲು ಉಷಾ ಮೆಹರಾ ಆಯೋಗ ರಚಿಸಿದಾಗ ಅದು ಮಾಲ, ಮಾದಿಗ, ಆದಿ ಆಂಧ್ರ ಎಷ್ಟು ಜನಸಂಖ್ಯೆ ಇದೆ ಎಂದು ಮಾಹಿತಿ ಸಂಗ್ರಹಿಸಿತು ಎಂದು ಮುನಿಯಪ್ಪ ತಿಳಿಸಿದರು.

ಅದರ ಆಧಾರದ ಮೇಲೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೊಳಿಸಲು ನಾವು ನಿರ್ಧಾರ ಮಾಡಿದ್ದೇವು. ಆದರೆ, ವರ್ಗೀಕರಣ ಮಾಡಲು ಸಾಧ್ಯವಾಗಲಿಲ್ಲ. ಈ ಸಮುದಾಯಕ್ಕೆ ಸರಿಯಾದ ನ್ಯಾಯ ಸಿಗಲೇಬೇಕೆಂದು ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿಗೊಳಿಸಲು ಒಂದು ಐತಿಹಾಸಿಕ ಮಹತ್ವದ ತೀರ್ಪು ನೀಡಿರುವುದು ಈ ಸಮುದಾಯಕ್ಕೆ ನ್ಯಾಯ ಸಿಗುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ತೀರ್ಪು ಬಂದ ಕೂಡಲೇ ನಾನು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ಮಾಡಿದೆವು. ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿದಾಗ ಮುಖ್ಯಮಂತ್ರಿಯು ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡುವುದಾಗಿ ತಿಳಿಸಿದರು ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿ, ತಡ ಮಾಡದೆ ಒಳ ಮೀಸಲಾತಿ ಅನುಷ್ಠಾನ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಸರಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ್ದು, ಅದು ನಿಖರವಾದ ದತ್ತಾಂಶಗಳನ್ನು 40 ದಿನಗಳಲ್ಲಿ ಸಂಗ್ರಹಿಸಲಿದೆ ಎಂದು ಮುನಿಯಪ್ಪ ಹೇಳಿದರು.

ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲಾಗುವುದು. ನಾಗಮೋಹನ್ ದಾಸ್ ಈ ಸಮುದಾಯದ ಜನಸಂಖ್ಯೆಯ ಅನುಗುಣವಾಗಿ ಮತ್ತು ಆರ್ಥಿಕ ಸ್ಥಿತಿಗಳನ್ನು ಅವಲೋಕನ ಮಾಡಿ ನಿರ್ದಿಷ್ಟವಾದ ಮಾಹಿತಿಗಳೊಂದಿಗೆ ನಮಗೆ ನ್ಯಾಯ ಒದಗಿಸಲಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರದ ಎಲ್ಲ ಸಚಿವರು ಈ ಒಳ ಮೀಸಲಾತಿ ಅನುಷ್ಠಾನಕ್ಕೆ ಬೆಂಬಲವಾಗಿದ್ದಾರೆ. ಆದುದರಿಂದ, ನಾವು ನಮ್ಮ ಸೋದರ ಸಮುದಾಯಗಳ ಸಚಿವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಈಗಾಗಲೇ ತೆಲಂಗಾಣ ರಾಜ್ಯ ಒಳ ಮೀಸಲಾತಿ ಅನುಷ್ಠಾನ ಮಾಡಿದ್ದು ಆಂಧ್ರ್ರಪ್ರದೇಶ, ಹರಿಯಾಣ ರಾಜ್ಯಗಳು ಅನುಷ್ಠಾನಕ್ಕೆ ಮುಂದಾಗಿವೆ. ನಮ್ಮ ರಾಜ್ಯದಲ್ಲಿಯೂ ಮುಂದಿನ 40 ದಿನಗಳಲ್ಲಿ ಸೂಕ್ತ ಅಂಕಿ ಆಂಶಗಳನ್ನು ಸಂಗ್ರಹಿಸಿ ಅನುಷ್ಠಾನ ಮಾಡಲಿದ್ದೇವೆ. ಈ ಬಗ್ಗೆ ಯಾರಿಗೂ ಸಂಶಯಬೇಡ ಎಂದು ಮುನಿಯಪ್ಪ ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಮಾದರ ಚನ್ನಯ್ಯ ಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಮಾಜಿ ಸಂಸದರಾದ ಚಂದ್ರಪ್ಪ, ರಮೇಶ್ ಜಿಗಜಿಣಗಿ, ಮುಖಂಡ ಮಾರಸಂದ್ರ ಮುನಿಯಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಶಾಸಕ ಬಸವರಾಜ್ ಧಡೆಸುಗೂರು, ಸುಜಾತ ದೊಡ್ಡಮನಿ ಹಾಗೂ ಸಮುದಾಯದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News