ರನ್ಯಾ ರಾವ್ ಸಂಪರ್ಕದಲ್ಲಿರುವ ಸಚಿವರ ಹೆಸರನ್ನು ಸದನದಲ್ಲೇ ಬಹಿರಂಗಪಡಿಸುವೆ : ಯತ್ನಾಳ್
Update: 2025-03-16 21:45 IST

ವಿಜಯಪುರ : ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ನಂಟು ಹೊಂದಿರುವ ಸಚಿವರು ಯಾರು ಅನ್ನೋದು ಗೊತ್ತಿದೆ. ಅಧಿವೇಶನಲ್ಲೇ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರನ್ಯಾ ಪ್ರಕರಣದ ನಂಟು ಹೊಂದಿರುವ ಸಚಿವರು ಯಾರು ಎಂದು ಗೊತ್ತಿದೆ. ರನ್ಯಾಗೆ ಪ್ರೋಟೊಕಾಲ್ (ಶಿಷ್ಟಾಚಾರ) ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನ ಎಲ್ಲಿಂದ ತಂದರು? ಚಿನ್ನ ಎಲ್ಲಿಟ್ಟುಕೊಂಡು ತಂದರು? ಎಲ್ಲವೂ ಗೊತ್ತಿದೆ ಎಂದು ಹೇಳಿದರು.
ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪಿದೆ ಎಂಬ ಸಚಿವ ಸಂತೋ ಲಾಡ್ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ತಪ್ಪು ಮಾಡಿದರೂ ಅದು ತಪ್ಪೇ. ನಾವು ಬಿಜೆಪಿಯವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ತಪ್ಪೇ, ನಮ್ಮ ಕೇಂದ್ರದ ಸಚಿವರು ಇದರಲ್ಲಿ ಭಾಗಿ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.