ವಿಜಯಪುರ: ಪ್ರವಾದಿ ಅವರ ಬಗ್ಗೆ ಅಗೌರವದ ಹೇಳಿಕೆ ಖಂಡಿಸಿ ಯತ್ನಾಳ್ ವಿರುದ್ಧ ಮುಸ್ಲಿಮರಿಂದ ಪ್ರತಿಭಟನೆ

Update: 2025-04-28 23:49 IST
ವಿಜಯಪುರ: ಪ್ರವಾದಿ ಅವರ ಬಗ್ಗೆ ಅಗೌರವದ ಹೇಳಿಕೆ ಖಂಡಿಸಿ ಯತ್ನಾಳ್ ವಿರುದ್ಧ ಮುಸ್ಲಿಮರಿಂದ ಪ್ರತಿಭಟನೆ
  • whatsapp icon

ವಿಜಯಪುರ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಬಗ್ಗೆ ಅಗೌರವ ತೋರುವ ಹೇಳಿಕೆ ನೀಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯಪುರದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಅಸಮಾಧಾನ ಹೊರಹಾಕಿದರು. ಬಳಿಕ ಜಿಲ್ಲಾಧಿಕಾರಿಯವರ ಮೂಲಕ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮನಗೂಳಿ ಮಠದ ವೀರತಿಶಾನಂದ ಸ್ವಾಮೀಜಿ, "ಯತ್ನಾಳ್ ಪ್ರವಾದಿ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು ಅಕ್ಷಮ್ಯ ಅಪರಾಧ. ಸಣ್ಣ ವಯಸ್ಸಿನಲ್ಲೇ ಕೇಂದ್ರ ಸಚಿವರಾದಾಗ ಯತ್ನಾಳ್‌ ಅವರು ಭವಿಷ್ಯದಲ್ಲಿ ಪ್ರಧಾನಿ ಆಗುತ್ತಾರೆ ಎಂದು ಭಾವಿಸಿದ್ದೆವು. ಆದರೆ ಅವರು ತಮ್ಮ ಹರಕು ಬಾಯಿಂದಾಗಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ" ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಹಿರಿಯರಾದ ಯೂಸೂಫ್ ಖಾಜಿ ಮಾತನಾಡಿ, ಪ್ರವಾದಿ ಬಗ್ಗೆ ಅಗೌರವ ತೋರಿರುವುದು ಸರಿಯಲ್ಲ, ಇನ್ನಾದರೂ ಬಸನಗೌಡ ಪಾಟೀಲ ಯತ್ನಾಳ ಕ್ಷಮೆ ಕೇಳಲಿ ಎಂದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಕರ್ನಾಟಕ ಅಹಲೆ ಸುನ್ನತ್ ರಾಜ್ಯಾಧ್ಯಕ್ಷ ಸೈಯದ್ ತನ್ವೀರಪೀರಾ ಹಾಶ್ಮೀ, ಸಚಿವ ಶಿವಾನಂದ ಪಾಟೀಲ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಠಾಧೀಶರಾದ ವೀರ ಯತೀಶಾನಂದ ಮಹಾಸ್ವಾಮೀಜಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಪ್ರಮುಖರಾದ ಮುಹಮ್ಮದ್ ರಫೀಕ್ ಟಪಾಲ್, ಅಡಿವೆಪ್ಪ ಸಾಲಗಲ್ಲ, ಎಸ್.ಎಂ.ಪಾಟೀಲ ಗಣಿಹಾರ, ಎಂ.ಸಿ. ಮುಲ್ಲಾ, ಜಮೀರ ಭಕ್ಷಿ, ಅಬ್ದುಲ್‌ ರಝಾಕ್ ಹೊರ್ತಿ, ಸಜ್ಜಾದೆಪೀರಾ ಮುಶ್ರೀಫ್, ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ, ರಫೀಕ್‌ಅಹ್ಮದ್ ಖಾಣೆ, ಶ್ರೀನಾಥ ಪೂಜಾರಿ, ಫಯಾಝ್‌ಕಲಾದಗಿ, ಶಕೀಲ್ ಬಾಗಮಾರೆ, ನ್ಯಾಯವಾದಿ ಸೈಯದ್ ಆಸೀಫುಲ್ಲಾ ಖಾದ್ರಿ ಮೊದಲಾದವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News