ಪ್ರವಾದಿ ಕುರಿತು ಅವಹೇಳನಾಕಾರಿ ಹೇಳಿಕೆ; ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ : ‘ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಎನ್ನಲು ಹೋಗಿ ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಗೂಂಡಾಗಿರಿ, ಹಫ್ತಾ ವಸೂಲಿ ಮಾಡಲು ಆಗದೇ ಹತಾಶರಾಗಿರುವ ಕಾಂಗ್ರೆಸಿಗರು ಪೈಗಂಬರ್‌ಗೆ ನೆಪ ಮಾಡಿಕೊಂಡು, ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಮತ್ತೊಂದು ಧರ್ಮವನ್ನು ಹೀಯಾಳಿಸುವ ಸಂಸ್ಕೃತಿ ಇಲ್ಲ. ನಮ್ಮ ಗುರು, ಹಿರಿಯರು ಕಲಿಸಿಲ್ಲ ಎಂದು ಹೇಳಿದರು.
ನನ್ನನ್ನು ಮುಗಿಸಲು ಆಗಲ್ಲ :
ನನ್ನನ್ನು ಮುಗಿಸುವುದಾಗಿ ಬೆದರಿಕೆ ಒಡ್ಡಿರುವ ಆಡಿಯೋ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದು ಶೀಘ್ರ ಗೊತ್ತಾಗಲಿದೆ. ನನ್ನನ್ನು ಮುಗಿಸಲು ಯಾರಿಗೂ ಆಗಲ್ಲ, ಇಡೀ ಕರ್ನಾಟಕದ ಹಿಂದೂಗಳು ನನ್ನ ಜೊತೆ ಇದ್ದಾರೆ. ನನ್ನನ್ನು ಮುಗಿಸಲು ಹೋದರೆ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿದರು.