ಆರ್‌ಟಿಇ ಅಡಿ ಶಾಲಾ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಎ.15ರಿಂದ ಅವಕಾಶ
ಸಾಂದರ್ಭಿಕ ಚಿತ್ರ | PC:Meta AI
ಬೆಂಗಳೂರು : ಖಾಸಗಿ ಮತ್ತು ಅನುದಾನಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ(ಆರ್ ಟಿಇ) ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸುವ ಕುರಿತಾಗಿ ಶಿಕ್ಷಣ ಇಲಾಖೆಯು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಲು ಎ.15ರಿಂದ ಮೇ.12ರ ವರೆಗೆ ಅವಕಾಶ ನೀಡಲಾಗಿದೆ.
ಮಾರ್ಗಸೂಚಿಯಂತೆ ಮಾ.28ರಂದೇ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿದಂತೆ ನೆರೆಹೊರೆಯ ಎಲ್ಲ ಶಾಲೆಗಳ ತಾತ್ಕಾಲಿಕ ಪಟ್ಟಿಯನ್ನು ಶಿಕ್ಷಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.
ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿಯನ್ನು ಶಾಲಾವಾರು ಶೇ.25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಕನಿಷ್ಟ ಲಭ್ಯವಿರುವ ಶಾಲಾವಾರು ಸೀಟುಗಳ ಸಂಖ್ಯೆಯನ್ನು ಆಯಾ ಜಿಲ್ಲೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಅಥವಾ ಕಛೇರಿಯ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಸಿ, ದಾಖಲೆ ಪರಿಶೀಲನೆ ನಂತರ ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮೇ 17ರಂದು ಪ್ರಕಟಿಸಲಾಗುವುದು. ಆನ್ ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಮೇ 21ರಂದು ನಡೆಸಲಾಗುವುದು. ಮೇ 22ರಿಂದ ಮೇ 31ವರೆಗೆ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭವಾಗಲಿದೆ ಎಂದು ಇಲಾಖೆ ಹೇಳಿದೆ.