ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2025-04-02 19:02 IST
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
  • whatsapp icon

ಹೊಸದಿಲ್ಲಿ : ರಾಜ್ಯದಲ್ಲಿ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಕೇಂದ್ರ ರಸ್ತೆ, ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಪೂರಕವಾಗಿರುವ ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದರು.

ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ರಸ್ತೆ, ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವುದಕ್ಕಾಗಿ ರಾಜ್ಯದ ಪರವಾಗಿ ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾಗಿರುವ ಪ್ರಮುಖ ಯೋಜನೆಗಳು: ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಮೈಸೂರು ನಗರ)ದಲ್ಲಿ ಫ್ಲೈಓವರ್ ನಿರ್ಮಾಣ. 30.35 ಕಿ.ಮೀ. ಉದ್ದದ ಹುಬ್ಬಳ್ಳಿ ಧಾರವಾಡ ಷಟ್ಪಥ ಬೈಪಾಸ್ ನಿರ್ಮಾಣ. ರಾ.ಹೆ 369 ಇ(ಸಿಗಂದೂರು ಸೇತುವೆ)ರಲ್ಲಿ ಶರಾವತಿ ಹಿನ್ನೀರಿನ ಮೇಲೆ ಪ್ರಮುಖ ಸೇತುವೆ ನಿರ್ಮಾಣ ಮಾಡಬೇಕಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾ.ಹೆ.167 ಹಗರಿ-ಜೆಡ್ಚೆರ್ಲಾ ಸೆಕ್ಷನ್ ನಲ್ಲಿ ಕೃಷ್ಣಾ ನದಿ ಮೇಲೆ 180.865 ಕಿ.ಮೀ.ನಲ್ಲಿ ಪ್ರಮುಖ ಸೇತುವೆ ನಿರ್ಮಾಣ. ಹೊಸಪೇಟೆಯಿಂದ ಬಳ್ಳಾರಿ ಸೆಕ್ಷನ್ ನ ಹಳೆಯ ರಾ.ಹೆ-63(ಹೊಸ ರಾ.ಹೆ-67) ನ ಕಿ.ಮಿ.340+640 (ಬಳ್ಳಾರಿ ನಗರ ಮಿತಿಯಲ್ಲಿನ ಸುಧಾ ಕ್ರಾಸ್) ನಲ್ಲಿ ಐಅ-110ಇ ಬದಲಿಗೆ 2-ಲೇನ್ ರೈಲ್ವೆ ಮೇಲ್ಸೆತುವೆ ನಿರ್ಮಾಣ. ರಾ.ಹೆ.150ಎ ರಲ್ಲಿನ ಸಿಂದಿಗೆರಿ-ಬಳ್ಳಾರಿ ಸೆಕ್ಷನ್ ಕಿ.ಮೀ.235.00 ರಿಂದ 254.800ವರೆಗೆ ‘ಟೂ ಲೇನ್ ವಿತ್ ಪವೇಡ್ ಶೋಲ್ಡರ್ಸ್’ ಗೆ ಅಗಲೀಕರಣ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರವು ರಾಜ್ಯದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲದ ಅಭಿವೃದ್ಧಿಯನ್ನು ಬೆಂಬಲಿಸುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕಂದಾಯ ಇಲಾಖೆಯೊಂದಿಗೆ ಹಾಗೂ ಅರಣ್ಯ ತೀರುವಳಿ ಪ್ರಕ್ರಿಯೆ ತ್ವರಿತಗೊಳಿಸಲು ಅರಣ್ಯ ಇಲಾಖೆಯೊಂದಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಯೂಟಿಲಿಟಿ ಶಿಫ್ಟಿಂಗ್ ಕಾರ್ಯವನ್ನು ಚುರುಕುಗೊಳಿಸಲು ಸಂಬಂಧಪಟ್ಟ ಇಲಾಖೆಗೊಂದಿಗೆ ಸಭೆ ನಡೆಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

10 ಸಾವಿರ ಪಿ.ಯು.ಸಿ ಗಿಂತಲೂ ಸಂಚಾರ ತೀವ್ರತೆ ಹೆಚ್ಚಿರುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದರು.

ಯೋಜನೆಗಳು: ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಮೈಸೂರಿನ ರಾಷ್ಟ್ರೀಯ ಹೆದ್ದಾರಿ-275ರಲ್ಲಿ 9 ಗ್ರೇಡ್ ಸಪರೇಟರ್‌ಗಳ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ-75( ಹಳೆಯ ರಾ.ಹೆ 48) ರ ಶಿರಾಡಿ ಘಾಟ್ ನ 237+000 ರಿಂದ 263+000 (ಮಾರನಹಳ್ಳಿಯಿಂದ ಅಡ್ಡಹೊಳೆ ಸೆಕ್ಷನ್)ವರೆಗೆ ಸುರಂಗ ನಿರ್ಮಾಣ ಮಾಡುವ ಮೂಲಕ ಮಂಗಳೂರು ಬಂದರು (ದೇಶದ 7 ನೇ ಅತಿ ದೊಡ್ಡ ಬಂದರು) ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನಡುವೆ ಸಂಪರ್ಕವನ್ನು ಸುಧಾರಿಸಬೇಕು.

ಪುಣೆ-ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್ ಪ್ರೆಸ್ ವೇ ನ್ನು ಶೀಘ್ರವಾಗಿ ಮಂಜೂರು ಮಾಡಬೇಕು. ಮುಂಬರಲಿರುವ ವಾರ್ಷಿಕ ಯೋಜನೆ 20205-26 ರಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು 24 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿ ಮಂಜೂರು ಮಾಡಬೇಕು. ಬೆಂಗಳೂರು ನಗರದ ಹೆಬ್ಬಾಳ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ- 44 ರಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು.

ತಾತ್ವಿಕವಾಗಿ ಘೋಷಿತವಾಗಿರುವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಆದ್ಯತೆ ಮೇಲೆ ಮೇಲ್ದರ್ಜೆಗೇರಿಸಬೇಕು. ಬೆಂಗಳೂರು ನಗರದಲ್ಲಿ ಮೈಸೂರು ರಸ್ತೆಯನ್ನು ಸಂಪರ್ಕಿಸುವ ( ರಾ.ಹೆ- 275) ಮತ್ತು ಹೊಸೂರು ರಸ್ತೆ(ರಾ.ಹೆ-48 ಮತ್ತು ರಾ.ಹೆ-75) ( ಎಲೆಕ್ಟ್ರಾನಿಕ್ ಸಿಟಿ) ಮಾರ್ಗವಾಗಿ ತುಮಕೂರು ರಸ್ತೆ (ರಾ.ಹೆ-48), ಬಳ್ಳಾರಿ ರಸ್ತೆ ( ರಾ.ಹೆ-44) ಮತ್ತು ಹಳೆ ಮದ್ರಾಸು ರಸ್ತೆ(ಹಳೆ ರಾ.ಹೆ -4)ಸುರಂಗ ರಸ್ತೆ ನಿರ್ಮಾಣಕ್ಕೆ ನೆರವು ನೀಡಬೇಕು.

ಬೆಳಗಾವಿ ನಗರ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಬೆಳಗಾವಿ ನಗರದ ರಾ.ಹೆ-4 ರಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ. ಕಲಬುರಗಿ-ವಾಡಿ-ಯಾದಗಿರಿ-ಕೆಂದೆಚೂರ್-ಜಡ್ ಚೇರ್ಲಾ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಿ ರಸ್ತೆ ಅಗಲೀಕರಣ ಕೈಗೊಳ್ಳಬೇಕು.

ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ರಾ.ಹೆ 150ಎ(ಜೇವರ್ಗಿ-ಚಾಮರಾಜನಗರ ವಿಭಾಗ) ರಲ್ಲಿ ಭೀಮರಾಯನಗುಡಿ ಮತ್ತು ಶಹಪುರ ಪಟ್ಟಣಕ್ಕೆ 2 ಎಲ್+ ಪಿಎಸ್ ಗ್ರೀನ್ ಫೀಲ್ಡ್ ಸಂಯೋಜಿತ ಬೈಪಾಸ್ ನಿರ್ಮಾಣ ಮಾಡಬೇಕು. ರಾಜ್ಯದಲ್ಲಿ ಎಸ್.ಪಿ.ಯು.ಆರ್ ಅಡಿಯಲ್ಲಿ ರಾ.ಹೆ-752ಕೆ ನಿಂದ ರಾ.ಹೆ-65 ವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಬೇಕು.

ರಾಜ್ಯದಲ್ಲಿ ಎಸ್.ಪಿ.ಯು.ಆರ್ ಅಡಿಯಲ್ಲಿ ದೇವಲ್ ಗಾಣಗಾಪುರದಿಂದ ಪಂಡರಾಪುರವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಬೇಕು. ಈ ಎಲ್ಲಾ ಪ್ರಸ್ತಾವನೆಗಳನ್ನು ಪರಿಗಣಿಸಿ ಮಂಜೂರಾತಿಗಳನ್ನು ನೀಡಲು ಸಂಬಂಧಿಸಿದವರಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಲ್ಲಿಸಿದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಹೊಸದಿಲ್ಲಿಯಲ್ಲಿನ ರಾಜ್ಯದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News