ಮುಡಾ ಪ್ರಕರಣ | 15 ಸೈಟು ಡಿನೋಟಿಫೈ ಮಾಡಿ ಎಂದು ಅರ್ಜಿ ಕೊಟ್ಟಿದ್ದೇ ಸಿಎಂ ಭಾಮೈದ: ಎಚ್‌ಡಿಕೆ ಆರೋಪ
ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರ ಶಾಮೀಲಾಗಿದ್ದಾರೆ ಎಂದು ಪುನರುಚ್ಚರಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಿಎಂ ಭಾಮೈದ ಹದಿನೈದು ನಿವೇಶನಗಳನ್ನು ಡಿನೋಟಿಫೈ ಮಾಡಲು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಸಹಿಯನ್ನು ಪೋರ್ಜರಿ ಮಾಡಲಾಗಿತ್ತು ಎಂದು ಆರೋಪಿಸಿದರು.
ಶನಿವಾರ ನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಸತ್ಯವಂತ, ಸತ್ಯ ಹರಿಶ್ಚಂದ್ರ, ಸತ್ಯಮೆಯ ಜಯತೇ ಎಂದು ಹೇಳುವ ಆಸಾಮಿಯ ಚರಿತ್ರೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಆಗಿದೆ. ಆಸಕ್ತರು ಈ ಮಹಾನ್ ಗ್ರಂಥವನ್ನು ಓದಿ ಸತ್ಯವನ್ನು ತಿಳಿದುಕೊಳ್ಳಬಹುದು ಎಂದು ತಿಳಿಸಿದರು.
ಆಗ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. ಬಚ್ಚೇಗೌಡರು ನಗರಾಭಿವೃದ್ಧಿ ಸಚಿವರಾಗಿದ್ದರು. ಹದಿನೈದು ನಿವೇಶನ ಡಿನೋಟಿಫೈ ಮಾಡಿ ಎಂದು ಅವರ ಭಾವಮೈದ ಬಚ್ಚೇಗೌಡರಿಗೆ ಅರ್ಜಿ ಸಲ್ಲಿಸಿದರು. ಆ ಭಾಮೈದ ಎನ್ನುವ ಆಸಾಮಿ ಸಹಿಯನ್ನೇ ನಕಲಿ ಮಾಡಿದ್ದಾನೆ ಎಂದು ವರದಿಯಲ್ಲಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಅಲ್ಲದೆ ಅರ್ಜಿಯ ಮೇಲೆ ಇಂಗ್ಲಿಷ್ ನಲ್ಲಿ ಡಿಸಿಎಂ ಎಂದು ಬರೆಯಲಾಗಿದೆ. ಆ ಬಗ್ಗೆ ಬಂದಿರುವ ಎಫ್‍ಎಸ್‍ಎಲ್ ವರದಿಯನ್ನು ಲೋಕಾಯುಕ್ತ ವರದಿಯಲ್ಲಿ ಅಡಕವಾಗಿದೆ ಎಂದು ಲೋಕಾಯುಕ್ತ ವರದಿಯನ್ನು ಅವರು ಪ್ರದರ್ಶಿಸಿದರು.
ನಾನು ಸಾಚಾ, ಸತ್ಯವಂತ ಎಂದು ಹೇಳಿ ಜನರನ್ನು ದಾರಿ ತಪ್ಪಿಸುತ್ತಿರುವ ಸಿಎಂ ಅಸಲಿ ಮುಖ ಲೋಕಾಯುಕ್ತ ವರದಿಯಲ್ಲಿ ಇದೆ. ಈಗ ಅವರು ಹಗರಣದಿಂದ ಪಾರಾಗಲು ಯಾವ ಮಾರ್ಗ ಹಿಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.