ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಯಾವುದೇ ನೇಮಕಾತಿ ನಡೆಯುತ್ತಿಲ್ಲ, ಮೋಸಹೋಗಬೇಡಿ : ಲಕ್ಷ್ಮೀ ಹೆಬ್ಬಾಳ್ಕರ್

Update: 2025-04-05 17:28 IST
ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಯಾವುದೇ ನೇಮಕಾತಿ ನಡೆಯುತ್ತಿಲ್ಲ, ಮೋಸಹೋಗಬೇಡಿ : ಲಕ್ಷ್ಮೀ ಹೆಬ್ಬಾಳ್ಕರ್
  • whatsapp icon

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ನೇಮಕಾತಿ ವಿಚಾರವಾಗಿ ಕೆಲವರು ಹಣ ವಸೂಲು ಮಾಡುತ್ತಿರುವ ಕುರಿತು ದೂರುಗಳು ಕೇಳಿ ಬಂದಿದ್ದು, ಯಾರೂ ಮೋಸ ಹೋಗಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ನೇಮಕಾತಿ ವಿಚಾರವಾಗಿ ಮೋಸ ಹೋಗುವ ಪ್ರಕರಣಗಳು ಹೆಚ್ಚುತ್ತಿದೆ. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ನೇಮಕಾತಿ ವಿಚಾರವಾಗಿ ಸಾರ್ವಜನಿಕರಿಂದ ಕೆಲವು ಅನಾಮಧೇಯ ವ್ಯಕ್ತಿಗಳು ಹಣ ವಸೂಲು ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರಸ್ತುತ ಸಾಕ್ಷ್ಯಾಧಾರಗಳು ಸಹ ಲಭ್ಯವಾಗಿವೆ. ಈ ಕುರಿತು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಸಾಕ್ಷ್ಯಾಧಾರ ಸಮೇತ ದೂರು ನೀಡಲಾಗಿದೆ. ನಮ್ಮ ಇಲಾಖೆಯಲ್ಲಿ ಸದ್ಯ ಯಾವುದೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿಲ್ಲ. ಹಾಗೇನಾದರೂ ನೇಮಕಾತಿ ಇದ್ದಲ್ಲಿ ಸಕ್ಷಮ ಪ್ರಾಧಿಕಾರದ ಮೂಲಕವೇ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು ಯಾವುದೇ ನೇಮಕಾತಿ ಆಮಿಷಕ್ಕೆ ಒಳಗಾಗದೇ, ಯಾವುದೇ ಮಧ್ಯವರ್ತಿ ತಮ್ಮನ್ನು ನೇಮಕಾತಿ ಕುರಿತು ಸಂಪರ್ಕಿಸಿದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News