ವಿನಯ್ ಆತ್ಮಹತ್ಯೆ ಪ್ರಕರಣ | ಸಂಪೂರ್ಣ ತನಿಖೆ ನಡೆಸಿ ವರದಿ ನೀಡಬೇಕೆಂದು ಸೂಚನೆ ಕೊಟ್ಟಿದ್ದೇನೆ : ಜಿ.ಪರಮೇಶ್ವರ್
ಬೆಂಗಳೂರು: ಎಲ್ಲರಿಗೂ ಒಂದೇ ಕಾನೂನು. ಎ.ಎಸ್.ಪೊನ್ನಣ್ಣನಿಗೂ ಒಂದೇ, ಮಂಥರ್ ಗೌಡನಿಗೂ ಒಂದೇ. ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಡೆತ್‍ನೋಟ್‍ನಲ್ಲಿ ಎ.ಎಸ್.ಪೊನ್ನಣ್ಣ, ಮಂಥರ್ ಗೌಡ ಹೆಸರು ಉಲ್ಲೇಖವಾಗಿರುವ ಬಗ್ಗೆ ಅವರು ಮಾತನಾಡಿದರು.
ಕಾನೂನು ಎಲ್ಲರಿಗೂ ಒಂದೇ. ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ. ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ಸಿಬಿಐಗೆ ನೀಡುವ ವಿಚಾರದ ಬಗ್ಗೆ ನಿರ್ಧಾರ ಇಲ್ಲ. ಅಗತ್ಯವಿದ್ದರೆ ನೋಡೋಣ ಎಂದು ಜಿ.ಪರಮೇಶ್ವರ್ ಹೇಳಿದರು.
ಈ ಹಿಂದೆ ಫೆಬ್ರವರಿಯಲ್ಲಿ ನಡೆದಿರುವ ಘಟನೆಯಿಂದ ಈಗ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ವಾಟ್ಸಪ್‍ನಲ್ಲಿ ಹಾಕಿರುವ ಸಂದೇಶದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲೂ ಎಫ್‍ಐಆರ್ ಆಗಿದೆ. ಬೆಂಗಳೂರಿನಲ್ಲೂ ಎಫ್‍ಐಆರ್ ಆಗಿದೆ. ಎಲ್ಲವೂ ಸಮಗ್ರ ತನಿಖೆ ಆಗುತ್ತದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಡೆತ್‍ನೋಟ್ ಎನ್ನುವುದೇ ಇಲ್ಲ ಎಂದು ಹೇಳಲಾಗುತ್ತಿದೆ. ವಾಟ್ಸಪ್‍ನಲ್ಲಿ ಡೆತ್‍ನೋಟ್ ಕಳಿಸಿರುವವರು ಯಾರು?, ಡೆತ್‍ನೋಟ್ ಅಥವಾ ವಾಟ್ಸಪ್ ಡೆತ್‍ನೋಟ್ ಎಂದು ತಗೆದುಕೊಳ್ಳಬಹುದಾ ಎಂದು ಗೊಂದಲವಿದೆ. ಇದರಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಲು ಅವಕಾಶವೇ ಇಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅವರ ಮೇಲೆ ಕ್ರಮ ಆಗುತ್ತದೆ. ಹಾಗಾಗಿ ಸಂಪೂರ್ಣ ತನಿಖೆ ಮಾಡಿ ವರದಿ ಕೊಡಬೇಕೆಂದು ಸೂಚನೆ ಕೊಟ್ಟಿದ್ದೇನೆ ಎಂದು ಜಿ.ಪರಮೇಶ್ವರ್ ಹೇಳಿದರು.
ಸಾಮಾಜಿಕ ಜಾಲತಾಣವನ್ನು ಸಾಕ್ಷಿಯಾಗಿ ಗಣನೆಗೆ ತೆಗೆದುಕೊಳ್ಳಬಹುದು ಎಂದು ಕಾನೂನಿನಲ್ಲಿ ಇದ್ದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಹಿಂದೆ ವೀಡಿಯೊ ರೆಕಾರ್ಡ್ ಮಾಡಿದ್ದನ್ನು ಗಣನೆಗೆ ತೆಗೆದುಕೊಂಡಿದ್ದರು. ಈಗ ವಾಟ್ಸಪ್ ಅನ್ನು ಗಣನೆಗೆ ತಗೆದುಕೊಳ್ಳಬಹುದು ಎಂದರೆ ಪೊಲೀಸರು ಗಣನೆಗೆ ತಗೆದುಕೊಳ್ಳುತ್ತಾರೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಶಾಸಕರ ಹೆಸರು ಹೇಳಿದ ಕೂಡಲೇ ಅದನ್ನು ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ವಾಟ್ಸಪ್ ಅನ್ನು ಪರಿಶೀಲನೆ ಮಾಡಿದಾಗ ಏನಾದರು ಪಾತ್ರ ಇದೆ ಎಂದು ಕಂಡರೆ ಕ್ರಮ ತಗೆದುಕೊಳ್ಳಲಾಗುವುದು. ಬಿಜೆಪಿಯವರು ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾರೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಇದಕ್ಕೆ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದು ಜಿ.ಪರಮೇಶ್ವರ್ ಕಿಡಿಕಾರಿದರು.